ದಾವಣಗೆರೆ, ಮಾ. 7- ಹರಿಹರ ತಾಲ್ಲೂಕು ಸಾಲಕಟ್ಟೆ ಗ್ರಾಮದಲ್ಲಿ 2 ಎಕರೆ ಭೂಮಿಯನ್ನು ಸ್ಮಶಾನಕ್ಕೆ ತೆಗೆದಿರಿಸಿ ಉಳಿದ ಭೂಮಿಯನ್ನು ಸಾಗುವಳಿ ಮಾಡಿದ ದಲಿತ ಕುಟುಂಬಗಳಿಗೆ ರಿಜಿಸ್ಟರ್ ಮಾಡಿಸಿಕೊಡಬೇಕು ಎಂದು ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಸಾಲಕಟ್ಟೆ ಗ್ರಾಮದಲ್ಲಿ ಊರಿನ ಪ್ರಮುಖರು ಉದ್ದೇಶಪೂರ್ವಕವಾಗಿ ಸುಮಾರು 5 ದಲಿತ ಕುಟುಂಬಗಳು ಸಾಗುವಳಿ ಮಾಡಿದ ಸರ್ಕಾರಿ ಭೂಮಿಯನ್ನು ಸ್ಮಶಾನ ಭೂಮಿಯೆಂದು ಮೀಸಲಿರಿಸುವ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸಾಲಕಟ್ಟೆಯಲ್ಲಿ 15 ಎಕರೆ 30 ಸೆಂಟ್ಸ್ ಗೋಮಾಳ ಜಮೀನಿದ್ದು, ಇದರಲ್ಲಿ 1 ಎಕರೆ 30 ಸೆಂಟ್ಸ್ ನಂತೆ 5 ದಲಿತ ಕುಟುಂಬಗಳು ಉಳುಮೆ ಮಾಡುತ್ತಿವೆ. ಆದರೆ ದಲಿತರು ಸಾಗುವಳಿ ಮಾಡಿದ ಜಮೀನನ್ನು ಸೇರಿಸಿ 8 ಎಕರೆ ಭೂಮಿಯನ್ನು ಕೇವಲ 500 ಮನೆ ಇರುವ ಗ್ರಾಮಕ್ಕೆ ಸ್ಮಶಾನವನ್ನಾಗಿ ಮಾರ್ಪಡಿಸಿದ್ದಾರೆ. ಇನ್ನು ಉಳಿದ ಜಮೀನನ್ನು ಮೇಲ್ವರ್ಗದವರು ಸಾಗುವಳಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ 2 ಎಕರೆ ಭೂಮಿಯನ್ನು ಸ್ಮಶಾನಕ್ಕೆ ತೆಗೆದಿರಿಸಿ ಉಳಿದ ಭೂಮಿ ಯನ್ನು ಸಾಗುವಳಿ ಮಾಡಿದ ದಲಿತ ಕುಟುಂಬಗಳಿಗೆ ರಿಜಿಸ್ಟರ್ ಮಾಡಿಸಿಕೊಟ್ಟು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಒತ್ತಾಯಿಸಿದ ಅವರು, ಈ ಬಗ್ಗೆ ಮಾ.10 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಹೆಚ್.ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.