ಚಿತ್ರದುರ್ಗ, ಮಾ. 4 – ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲಂಚ ಪ್ರಕರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಒತ್ತಾಯಿಸುತ್ತಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಳ್ಳಿ ಹಾಕಿದ್ದಾರೆ.
ರಾಜೀನಾಮೆಗೆ ಆಗ್ರಹಿಸಿರುವ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ, ಸಿದ್ದರಾಮಯ್ಯ ವಿರುದ್ಧ
59 ಭ್ರಷ್ಟಾಚಾರ ಪ್ರಕರಣಗಳಿದ್ದವು. ಲೋಕಾಯುಕ್ತ ಸಂಸ್ಥೆಯನ್ನು ಅವರು ದುರ್ಬಲಗೊಳಿಸಿದ ಕಾರಣಕ್ಕಾಗಿ ಇವುಗಳ ತನಿಖೆ ಸಾಧ್ಯವಾಗಲಿಲ್ಲ ಎಂದರು.
ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ತಮ್ಮ ಸರ್ಕಾರ ಲೋಕಾಯುಕ್ತಕ್ಕೆ ಸ್ವಾತಂತ್ರ್ಯ ನೀಡಿದೆ. ಅದು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ ಎಂದರು. ಪ್ರತಿಪಕ್ಷಗಳಿಗೆ ರಾಜೀನಾಮೆ ಕೇಳುವುದನ್ನು ಬಿಟ್ಟರೆ ಬೇರೆ ಕೆಲಸ ಇಲ್ಲ. ಸಚಿವರೊಬ್ಬರ ಮನೆಯಲ್ಲಿ 2 ಲಕ್ಷ ರೂ. ಸಿಕ್ಕಾಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರೇ? ರಾಜ್ಯದಲ್ಲಿ ಬಲಿಷ್ಠ ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಬಂಧನವಾಗಿರುತ್ತಿತ್ತು ಎಂದರು.
ಇಂತಹ ಪ್ರಕರಣಗಳನ್ನು ದುರ್ಬಲಗೊಳಿಸಲು ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದರು ಎಂದೂ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 59 ಪ್ರಕರಣಗಳನ್ನು ಮುಚ್ಚಿ ಹಾಕಿತ್ತು. ಈಗ ಆರೋಪ ಮಾಡುವುದರಿಂದ ಆ ಪಾಪಗಳು ತೊಳೆದು ಹೋಗುವುದಿಲ್ಲ. ತಮ್ಮ ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿ ಹಾಕಲು ನನ್ನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ ಎಂದವರು ತರಾಟೆಗೆ ತೆಗೆದುಕೊಂಡರು.