ಹರಿಹರ ಕ್ಷೇತ್ರಕ್ಕೆ ಕೊಟ್ಟ ಭರವಸೆ ಈಡೇರಿಸಲು ಸಂಸದರು ವಿಫಲ

ಹರಿಹರ ಕ್ಷೇತ್ರಕ್ಕೆ ಕೊಟ್ಟ ಭರವಸೆ ಈಡೇರಿಸಲು ಸಂಸದರು ವಿಫಲ - Janathavaniಹರಿಹರ, ಫೆ. 27 – ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹರಿಹರ ಕ್ಷೇತ್ರದ ಜನತೆಗೆ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.

ನಗರದ ಹೆಚ್. ಶಿವಪ್ಪ ಸರ್ಕಲ್ ನಲ್ಲಿರುವ ಜೆಡಿಸ್ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹರಿಹರಕ್ಕೆ ಮೆಡಿಕಲ್ ಕಾಲೇಜು ತರಲು ವಿಫಲರಾಗಿದ್ದಾರೆ. ಹಾವೇರಿ ಮತ್ತಿತರೆ ಕಡೆ ಸಾಕಷ್ಟು ನ್ಯೂನತೆಗಳಿದ್ದರೂ ಸರಿಪಡಿಸಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ ಎಂದರು.

ಕೊಂಡಜ್ಜಿ ಕೆರೆ ಅಭಿವೃದ್ಧಿಯಾಗಿಲ್ಲ. ಚುನಾವಣೆ ಸಮಯದಲ್ಲಿ ಯೂರಿಯಾ ಕಾರ್ಖಾನೆ ಹಾಗೂ ಎಂ.ಆರ್.ಪಿ.ಎಲ್. ಕಾರ್ಖಾನೆ ಆರಂಭ ಮಾಡುವುದಾಗಿ ಗುದ್ದಲಿ ಪೂಜೆ ಮಾಡಿದರು. ಆದರೆ, ಇದುವರೆಗೂ ಕಾರ್ಯಗತವಾಗಿಲ್ಲ ಎಂದರು. ಶಿವಮೊಗ್ಗ – ಮರಿಯಮ್ಮನಹಳ್ಳಿ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಲು ಆದೇಶ ಆಗಿದೆ. ಆದರೂ, ರಸ್ತೆ ಅಭಿವೃದ್ಧಿಯಾಗದೇ ಇರುವುದಕ್ಕೆ ಇರುವ ಕಾರಣಗಳನ್ನು ತಿಳಿಸಬೇಕು ಎಂದವರು ಆಗ್ರಹಿಸಿದರು.

ಭೈರನಪಾದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಇದುವರೆಗೆ ಸಾಧ್ಯವಾಗಲಿಲ್ಲ. ಜನರಿಗೆ ಮರಳು ಮಾಡಿ ಮತ್ತು ರಾಮ, ಹನುಮ, ಸೀತಾ ಮಾತೆ ಹೆಸರನ್ನು ಹೇಳಿಕೊಂಡು ಮತವನ್ನು ಪಡೆಯಲು ಮುಂದಾಗದೆ ಜನ ಪರ ಕೆಲಸ ಮಾಡಬೇಕು ಎಂದು ಹೇಳಿದರು.

ಶಾಸಕ ಎಸ್. ರಾಮಪ್ಪ ಅವರು ಅಧಿಕಾರದ ಅವಧಿ ಮುಗಿಯುತ್ತದೆ ಎಂದು ನಗರ ಮತ್ತು ತಾಲ್ಲೂಕಿನಲ್ಲಿ ಅನೇಕ ಕಾಮಗಾರಿಗಳಿಗೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಬೆದರಿಕೆಯನ್ನು ಹಾಕಿ ಗುದ್ದಲಿ ಪೂಜೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ, ಕಾಮಗಾರಿಗಳಿಗೆ ಆದೇಶ ಪತ್ರ ಕೊಡದ ಕಾರಣ ಗುತ್ತಿಗೆದಾರರು ಕಾಮಗಾರಿಗೆ ಬರುತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗುತ್ತೂರು ಜಂಬಣ್ಣ, ವೀರುಪಾಕ್ಷಪ್ಪ, ಆರ್.ಸಿ.ಜಾವೇದ್, ದಿನೇಶ್ ಬಾಬು ಬಿ. ಅಲ್ತಾಫ್, ಮುಖಂಡರಾದ ಹಬೀಬ್ ಉಲ್ಲಾ,  ಅಂಗಡಿ ಮಂಜುನಾಥ್, ಕಲ್ಲಯ್ಯ ಸ್ವಾಮಿ, ತನ್ವೀರ್, ಸದ್ದಾಂ, ಅಡಕಿ ಕುಮಾರ್, ದೀಟೂರು ವಾಮಣ್ಣ, ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!