ಬಿಜೆಪಿ ಮತ್ತೆ ಬಂದರೆ ಅಭಿವೃದ್ಧಿ ಪರ್ವ

ಬಿಜೆಪಿ ಮತ್ತೆ ಬಂದರೆ ಅಭಿವೃದ್ಧಿ ಪರ್ವ - Janathavaniಶಿವಮೊಗ್ಗ, ಬೆಳಗಾವಿಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ಬೆಂಗಳೂರು,  ಫೆ. 27 – ಕರ್ನಾಟಕ ದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಅಭಿವೃದ್ಧಿ ಪರ್ವ ಕಾಣುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ತಿಳಿಸಿದ್ದಾರೆ. 

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಮೇಲಿಂದ ಮೇಲೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಮೋದಿ, ಸೋಮವಾರ ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ರೋಡ್ ಶೋ ಹಾಗೂ ಬೃಹತ್ ಜನಸ್ತೋಮ ವನ್ನುದ್ದೇಶಿಸಿ ಮಾತನಾಡಿದರು.

ಡಬಲ್ ಇಂಜಿನ್ ಸರ್ಕಾರವಿದ್ದರೆ, ರಾಜ್ಯದ ಅಭಿವೃದ್ಧಿಯನ್ನು ನೀವು ಕಣ್ಣಾರೆ ಕಾಣುತ್ತೀರಿ. ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ರಾಜ್ಯದಲ್ಲಿ ರಸ್ತೆ, ರೈಲು, ವಿಮಾನ ಸಂಪರ್ಕಕ್ಕೆ ಒತ್ತು ಕೊಟ್ಟು, ಹವಾಯಿ ಚಪ್ಪಲಿ ಹಾಕುವ ವ್ಯಕ್ತಿಯು ವಿಮಾ ನದಲ್ಲಿ ಹಾರಾಡುವ ಅವಕಾಶ ಮಾಡಿಕೊಟ್ಟಿ ದ್ದೇವೆ ಎಂದು ಮೋದಿ ಹೇಳಿದರು.

ನಮ್ಮದು ಬಡವರ ಪರ ಸರ್ಕಾರ, ಈ ಹಿಂದೆ ಹಾರಾಟಕ್ಕಾಗಿ ವಿಮಾನಗಳನ್ನು ವಿದೇಶದಿಂದ ಖರೀದಿ ಮಾಡಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ವದೇಶಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು. ಬಡವರೂ ಕೂಡಾ ವಿಮಾನದಲ್ಲಿ ಹಾರಾಟ ಮಾಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಇದಕ್ಕಾಗಿ ಉಡಾನ್ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿದರು. ಹಿಂದಿನ ಸರ್ಕಾರಗಳು ಸಣ್ಣ ಸಣ್ಣ ಗ್ರಾಮಗಳನ್ನು ನಿರ್ಲಕ್ಷಿಸಿದ್ದವು. ಆದರೆ ಡಬಲ್ ಇಂಜಿನ್ ಸರ್ಕಾರ ಎಲ್ಲರನ್ನೂ ಒಳ ಗೊಂಡ ಅಭಿವೃದ್ಧಿಯನ್ನು ಹೊಂದಿದೆ. ಇದು ನಮ್ಮ ಸರ್ಕಾರದ ಕೆಲಸದ ಪರಿಯಾಗಿದೆ. 

ಕರ್ನಾಟಕದಲ್ಲಿರುವ ಪ್ರವಾಸೋದ್ಯಮ ವನ್ನು ಅಭಿವೃದ್ಧಿ ಜೊತೆಗೆ ಸಂಪನ್ಮೂಲ ವೃದ್ಧಿಗಾಗಿ ನಾವು ಮೂಲ ಸೌಕರ್ಯಕ್ಕೆ ಒತ್ತು ಕೊಟ್ಟಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಒಂದು, ಎರಡು ವಿಮಾನ ಹೊಂದಿದ್ದ ಕರ್ನಾಟಕದಲ್ಲಿ ಈಗ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ವಿಮಾನ ನಿಲ್ದಾಣ ಸ್ಥಾಪನೆಗೊಳ್ಳಲಿದೆ.  ರೈಲ್ವೆ ಸಂಪರ್ಕವನ್ನು ಹೆಚ್ಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ, ಕರ್ನಾಟಕದ ಮಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. 

ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಆಗುತ್ತಿರುವುದರಿಂದ ಚೆನ್ನೈ-ಮುಂಬೈನಂತಹ ವಾಣಿಜ್ಯ ನಗರಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗುತ್ತಿದೆ ಎಂದರು. 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿರುವ ಮೋದಿ ಅವರು ಮಾರ್ಚ್ ತಿಂಗಳಲ್ಲಿ ನಾಲ್ಕು ಬಾರಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. 

ತಮ್ಮ ವರ್ಚಸ್ಸಿನಿಂದಲೇ ಮತ ಬುಟ್ಟಿಯನ್ನು ಗಟ್ಟಿ ಮಾಡಲು ಕಸರತ್ತು ನಡೆಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿ, ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿದರೆ, ಬೆಳಗಾವಿ ನಗರದ ಆಸುಪಾಸಿನಲ್ಲಿ 12 ಕಿಲೋಮೀಟರ್ ರೋಡ್ ಶೋ ನಡೆಸಿದರು. 

error: Content is protected !!