ಕಶೆಟ್ಟಿಹಳ್ಳಿಯಿಂದ ದಾವಣಗೆರೆಗೆ ಪಾದಯಾತ್ರೆ : ರಸ್ತೆ ತಡೆಗೆ ಮುಂದಾದ ರೈತರು, ಪಾದಯಾತ್ರೆ ತಡೆದ ಪೊಲೀಸರು
ದಾವಣಗೆರೆ, ಫೆ. 23- ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಶೆಟ್ಟಿಹಳ್ಳಿಯಲ್ಲಿ 18 ಎಕರೆ ಗ್ರಾಮಠಾಣಾ ಜಾಗವಿದ್ದು, ಸದರಿ ಜಾಗವನ್ನು ಸರ್ವೇ ಮಾಡಿಸಿ, ಹದ್ದುಬಸ್ತು ಮಾಡಿಸಿಕೊಡುವಂತೆ ಒತ್ತಾಯಿಸಿ ಕಶೆಟ್ಟಿಹಳ್ಳಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಸಲಾಗಿದ್ದ ಪಾದಯಾತ್ರೆಯನ್ನು ನಗರದ ಹೊರವಲಯದ ವಿಶ್ವಚೇತನ ವಸತಿ ಶಾಲೆ ಬಳಿ ತಡೆಯಲಾಯಿತು.
ಶಿರಮಗೊಂಡನಹಳ್ಳಿಯಿಂದ ಪಾದಯಾತ್ರೆ ವಿಶ್ವಚೇತನ ಶಾಲೆ ಹತ್ತಿರ ಬರುತ್ತಿದ್ದಂತೆ ಪಾದಯಾತ್ರಿಗಳು ರಸ್ತೆ ತಡೆ ಚಳವಳಿ ಮಾಡಲು ಮುಂದಾದಾಗ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುವ ಮುನ್ಸೂಚನೆ ಕಂಡು ಬಂದಾಗ, ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ತಡೆದರು.
ದಾವಣಗೆರೆ ನಗರ ಪ್ರವೇಶಿಸಲು ಅವಕಾಶ ನೀಡದಿದ್ದಾಗ ಹದಡಿ ರಸ್ತೆ ವಿಶ್ವಚೇತನ ಶಾಲೆ ಬಳಿ ಧರಣಿ ಆರಂಭಿಸಿ, ಭೂಸ್ವಾಧೀನ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದರು.
ಬಾಯಿ ಮಾತು ಬೇಡ, ಸರ್ವೇ ಆದೇಶ ಕೊಡಿ
ಬರೀ ಬಾಯಿ ಮಾತಿನಲ್ಲಿ ನಮಗೆ ನಂಬಿಕೆ ಇಲ್ಲ. ಸ್ಥಳದಲ್ಲೇ ಸರ್ವೇ ಮತ್ತು ಹದ್ದುಬಸ್ತು ಆದೇಶ ಪ್ರತಿ ಯನ್ನು ನೀಡಿದರೆ ಈಗಲೇ ಧರಣಿಯನ್ನು ತೆರವು ಗೊಳಿಸಿ, ವಾಪಸ್ ಹಳ್ಳಿಗೆ ತೆರಳುತ್ತೇವೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ತಾಕೀತು ಮಾಡಿದರು.
ಗ್ರಾಮ ಠಾಣಾ ಜಮೀನು ಅಳತೆ ಮಾಡಿ, ಹದ್ದುಬಸ್ತು ಮಾಡಿಕೊಡುವಂತೆ ಆಗ್ರಹಿಸಿ, ಕೆಶೆಟ್ಟಿಹಳ್ಳಿಯಿಂದ ದಾವಣಗೆರೆ ಡಿಸಿ ಕಚೇರಿಯವರೆಗೆ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದರು.
ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾ.ಪಂ. ವ್ಯಾಪ್ತಿಯ ಕಶೆಟ್ಟಿಹಳ್ಳಿ ಗ್ರಾಮದಲ್ಲಿ 18 ಎಕರೆ ಗ್ರಾಮಠಾಣಾ ಜಮೀನಿನಲ್ಲಿ 14 ಎಕರೆ ಜಾಗಕ್ಕೆ ಅಳತೆ ಮಾಡಿ, ಹದ್ದುಬಸ್ತು ಮಾಡಿ ನಿವೇಶನ ರಹಿತ ರೈತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಗ್ರಾಮ ಠಾಣಾ ಗಡಿಯನ್ನು ಮಾಪಕರು ನಿಗದಿಪಡಿಸಿದ್ದರೂ ಪೂರ್ಣಪ್ರಮಾಣದಲ್ಲಿ ನಿಖರತೆ ಇರಲಿಲ್ಲ. ಆದರೂ ನಿವೇಶನಗಳನ್ನು ಮಾಡಿ ರಾಜೀವ್ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಡಲಾಗಿತ್ತು. ಗ್ರಾಮದ ಕೆಲವರು ನ್ಯಾಯಾಲಯದ ಮೊರೆ ಹೋಗಿ ಈ ಕಾರ್ಯಕ್ಕೆ ತಡೆಯೊಡ್ಡಿದ್ದರು ಎಂದು ಹೇಳಿದರು.
ಕಳೆದ ಏಳೆಂಟು ವರ್ಷಗಳಿಂದ ಗಡಿ ಗುರುತಿಸಿ ಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡುತ್ತಾ ಬರಲಾಗಿತ್ತು. ಮನವಿಗೆ ಮನ್ನಣೆ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯೆ ವಹಿಸಿದ್ದಾರೆ.
ಸೆಪ್ಟಂಬರ್ ತಿಂಗಳಲ್ಲೂ ಸಹ ಎರಡು ಬಾರಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮೂಲಕ ಗಡಿ ಗುರುತಿಸಲು ಒತ್ತಾಯಿ ಸಲಾಗಿತ್ತು. ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಡಿ. 31 ರೊಳಗಾಗಿ ಗ್ರಾಮಠಾಣಾ ಗಡಿ ಗುರುತಿಸುವ ಕಾರ್ಯವನ್ನು ನಿಖರವಾಗಿ ಮಾಡಿಕೊಡಲಾಗುವುದೆಂದು ಸಂಬಂಧಪಟ್ಟ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕರೂ ಭರವಸೆ ನೀಡಿದ್ದರು. ಆದರೆ ಭರವಸೆ ಹುಸಿಯಾಗಿದ್ದರಿಂದ ಕೂಡಲೇ ಅಧಿಕಾರಿಗಳು ಮೂರು ದಿನಗಳ ಒಳಗಾಗಿ ಅಳತೆ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ದುರ್ಗಶ್ರೀ ಧರಣಿ ಸ್ಥಳಕ್ಕೆ ಬಂದು ಧರಣಿ ನಿರತರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ, ಲಿಖಿತ ಆದೇಶ ನೀಡಿದರೆ ಈಗಲೇ ಧರಣಿ ನಿಲ್ಲಿಸುವುದಾಗಿ ನೇತೃತ್ವ ವಹಿಸಿದ್ದ ತೇಜಸ್ವಿ ಪಟೇಲ್ ಪ್ರತಿಕ್ರಿಯಿಸಿದಾಗ ಬಂದ ದಾರಿಗೆ ಸುಂಕವಿಲ್ಲವಂತೆ ಉಪವಿಭಾಗಾ ಧಿಕಾರಿಗಳು ಮೇಲಾಧಿಕಾರಿಗಳ ಜೊತೆ ಮಾತನಾಡುವುದಾಗಿ ಹೇಳಿ ವಾಪಸ್ಸಾದರು.
ಭೂಸ್ವಾಧೀನ ಇಲಾಖೆ ಉಪನಿರ್ದೇಶಕರು ಧರಣಿ ನಿರತರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಗ್ರಾಮಠಾಣಾ ಜಾಗದ ಬಗ್ಗೆ ಇಲಾಖೆ ಆಯುಕ್ತರಿಂದ ಆದೇಶ ಪತ್ರ ಬರಬೇಕಾಗುತ್ತದೆ. ಸ್ವಲ್ಪ ಸಮಯಾವಕಾಶ ಬೇಕಾಗಿರುವುದರಿಂದ ಅವರೊಂದಿಗೆ ಪತ್ರದ ಮೂಲಕ ಮನವಿ ಮಾಡುವೆ ಎಂದು ಹೇಳಿದಾಗ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ನಾಳೆಯ ಬೆಳವಣಿಗೆ ನೋಡಿಕೊಂಡು ಪ್ರತಿಭಟನೆ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್, ಕತ್ತಲಗೆರೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಹಾರುದ್ರಯ್ಯ, ಸದಸ್ಯರಾದ ಪಾರ್ವತಿಬಾಯಿ, ಚಂದ್ರನಾಯ್ಕ, ರಾಮಸ್ವಾಮಿ, ತಿಪ್ಪಯ್ಯ, ಕೆ.ಟಿ. ಲೋಕಪ್ಪ, ಕರಿಬಸಪ್ಪ, ಬಿ. ಸುರೇಶ್, ಆರ್.ಶಿವು, ಕೆ.ಎಂ. ಮಂಜುನಾಥ, ವಿಶ್ವಾರಾಧ್ಯ, ಲೋಕೇಶ್ ನಾಯ್ಕ, ಬೇಬಿಬಾಯಿ, ಲೋಕಿಬಾಯಿ, ಜಗದೀಶ್, ಅಭಿಷೇಕ್ ಮತ್ತಿತರರು ಪಾಲ್ಗೊಂಡಿದ್ದರು.
ಕಾಳಜಿ ವಹಿಸಿದ ಅಧಿಕಾರಿಗಳು : ಕಳೆದ 8 ವರ್ಷಗಳಿಂದಲೂ ಗ್ರಾಮ ಠಾಣಾ ಗುರುತಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಂದು ಕಶೆಟ್ಟಿಹಳ್ಳಿಯಿಂದ ದಾವಣಗೆರೆಯವರೆಗೆ ಸುಮಾರು 33 ಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ಮಾಡಿಕೊಂಡು ಬಂದಿದ್ದರೂ, ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಆದರೂ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯೆ ವಹಿಸುತ್ತಿರುವುದು ಸರಿಯಲ್ಲ ಎಂದು ಗ್ರಾ.ಪಂ. ಸದಸ್ಯ ಮಹಾರುದ್ರಯ್ಯ ದೂರಿದರು.