ವಕ್ಫ್ ಬೋರ್ಡ್ ‍ಹಣ ದುರುಪಯೋಗ ; ಕ್ರಮ ಜರುಗಿಸದಿದ್ದರೆ ಲೋಕಾಯುಕ್ತಕ್ಕೆ ದೂರು

ಹರಪನಹಳ್ಳಿ, ಫೆ.21- ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಸರ್ಕಾರದಿಂದ ವಕ್ಫ್‌ ಬೋರ್ಡ್ ಮೂಲಕ ಲಕ್ಷಾಂತರ ಹಣವನ್ನು ಮಂಜೂರು ಮಾಡಿಸಿಕೊಂಡು ಕಾಮಗಾರಿ ಕೈಗೊಳ್ಳದೆ ಇಲ್ಲಿಯ ಮುಸ್ಲಿಂ ಬರಿಯಲ್ ಗ್ರೌಂಡ್ ಸುನ್ನಿ-ಖಬರ್‍ಸ್ತಾನ ಸಮಿತಿಯ ಮಾಜಿ ಅಧ್ಯಕ್ಷ ಎ.ಮೂಸಾ ಸಾಬ್ ಹಾಗೂ ಕಾರ್ಯದರ್ಶಿ ಬಡಿಗಿ ರಹಮತ್‌ವುಲ್ಲಾ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಂದಾಯ ಇಲಾಖೆ ನಿವೃತ್ತ ನೌಕರ ಹಾಗೂ ಸಾಮಾಜಿಕ ಕಾರ್ಯಕರ್ತ ಆರ್.ದಸ್ತಗೀರ್ ಸಾಬ್ ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿನ್ನೆ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಸಾ ಸಾಬ್‍ ಅವರು ತಮ್ಮಷ್ಟಕ್ಕೆ ತಾವೇ ಸ್ವಯಂ ಘೋಷಿತ ಸಮಿತಿ ಮಾಡಿಕೊಂಡು ವಕ್ಫ್ ಬೋರ್ಡ್‍ನಿಂದ ಸಮಿತಿಗೆ ಆಗಸ್ಟ್ 2017ರಲ್ಲಿ ಅನುಮತಿ ಪಡೆದಿದ್ದಾರೆ. ಆ ಸಮಿತಿಯಿಂದ  ಈದ್ಗಾ ಮತ್ತು ಖಬರ್‍ಸ್ತಾನ ಕಾಂಪೌಂಡ್ ಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 2018ರಲ್ಲಿ ಹಂತ ಹಂತವಾಗಿ ಒಟ್ಟು 11 ಲಕ್ಷ ರೂ.ಗಳನ್ನು ವಕ್ಫ್‌ ಬೋರ್ಡ್ ಮೂಲಕ ಸರ್ಕಾರದಿಂದ ಪಡೆದಿರುತ್ತಾರೆ. ನಂತರ ಯಾವುದೇ ಕಾಮಗಾರಿ ಮಾಡದೇ ಮಂಜೂರಾದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ನಂತರ ಸರ್ಕಾರಕ್ಕೆ ಪಾವತಿಸಬೇಕಾದ ಮೌಲ್ಯವರ್ಧಿತ ತೆರಿಗೆ ಪಾವತಿಸಿರುವುದಿಲ್ಲ, ಸಮಿತಿಯ ಲೆಕ್ಕ ಪತ್ರಗಳನ್ನು ಪ್ರತಿ ವರ್ಷ ಲೆಕ್ಕ ಪರಿಶೋಧನೆ ಮಾಡಿಸಿರುವುದಿಲ್ಲ. ಈ ಸಂಬಂಧ ದೂರು ನೀಡಿದಾಗ ಬಳ್ಳಾರಿಯಿಂದ ಬಂದ ಆಡಿಟ್ ಅಧಿಕಾರಿಗಳು ತನಿಖೆ ನಡೆಸಿ, ಎ.ಮೂಸಾ ಸಾಬ್ ಮತ್ತು ರಹಮತ್‌ವುಲ್ಲಾ ಅವರಿಂದ ವಿವರಣೆ ಪಡೆದು  ನಂತರ ಬೋಗಸ್ ಆಗಿರುವ ಬಗ್ಗೆ ವರದಿ ನೀಡಿರುತ್ತಾರೆ ಎಂದರು.

ದಾವಣಗೆರೆ ಜಿಲ್ಲಾ ವಕ್ಫ್ ಅಧಿಕಾರಿಗಳು ಇಲ್ಲಿಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಬಂಧಪಟ್ಟ ಬ್ಯಾಂಕ್ ಖಾತೆಯ ವ್ಯವಹಾರವನ್ನು ಸ್ಥಗಿತಗೊಳಿಸು ವಂತೆ ಮೇ 2018ರಂದು ಪತ್ರ ಬರೆದಿದ್ದಾರೆ. ಇವರ ವ್ಯವಹಾರದಲ್ಲಿ ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಚೇರ್ಮನ್ ಸಿರಾಜ್‍ ಮಿಲಾಪಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಈ ಸಂಬಂಧ ಜಿಲ್ಲಾ ಮತ್ತು ರಾಜ್ಯ ವಕ್ಫ್ ಬೋರ್ಡ್ ಮಂಡಳಿಗೆ ಸಾಕಷ್ಟು ಬಾರಿ ದಾಖಲೆ ಸಮೇತ ಲಿಖಿತ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರು ವುದಿಲ್ಲ. ಈ ಕುರಿತು   ಎ.ಮೂಸಾ ಸಾಬ್,  ಬಡಿಗಿ ರಹಮತ್‌ವುಲ್ಲಾರವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣದ ದರ್ಗಾ ಮಸೀದಿ ಅಧ್ಯಕ್ಷ ಅಶ್ರಫ್‌ ಅಲಿ, ಉಪಾಧ್ಯಕ್ಷ ಮಾಬುಬಾಷ್, ಕಾರ್ಯದರ್ಶಿ ಜಿ.ರಾಜು ಉಪಸ್ಥಿತರಿದ್ದರು.

error: Content is protected !!