ದಾವಣಗೆರೆ, ಫೆ.16- ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ದಿನಾಂಕ 20ರಂದು ಸಂಜೆ ಮಹಾ ಶಿವರಾತ್ರಿ ನಿಮಿತ್ತ 1008 ದಂಪತಿಗಳು ಏಕಕಾಲದಲ್ಲಿ ಶಿವಪೂಜೆ ಮಾಡಲಿದ್ದಾರೆ. ಸಂಜೆ 5 ರಿಂದ 12ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಹೆಬ್ಬಾಳು ಕ್ಷೇತ್ರದ ಶ್ರೀ ರುದ್ರೇಶ್ವರ ಸ್ವಾಮೀಜಿ ಲಿಂಗಪೂಜೆ ನೆರವೇರಿಸಿ ಆಶೀರ್ವಚನ ನೀಡಲಿದ್ದು, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಶಿವರಾತ್ರಿ ಸಂದೇಶ ನೀಡುವರು. ಜತೆಗೆ ಶಿವ ಜಾಗರಣೆಯ ಭಾಗವಾಗಿ ಅಪರೂಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. 4 ತಾಸಿಗೂ ಹೆಚ್ಚು ಕಾಲ ಡೊಳ್ಳು ಕುಣಿತ, ಸ್ಯಾಕ್ಸೋಫೋನ್ ವಾದನ, ವೀಣಾ ವಾದನ, ಭಜನೆ, ಚೌಡಿಕೆ ಪದ, ಭರತನಾಟ್ಯ, ಸಾಮೂಹಿಕ ನೃತ್ಯ, ಸಂಗೀತ, ಭಕ್ತಿಗೀತೆ ಗಾಯನ ಇರುತ್ತದೆ.
ಕಾರ್ಯಕ್ರಮಕ್ಕಾಗಿ ವಿಶೇಷ ಪೆಂಡಾಲ್ ಹಾಕಿಸಲಾಗುತ್ತಿದ್ದು, ಮನುಜ ಮತ ವಿಶ್ವ ಪಥ ತತ್ವದಲ್ಲಿ ಎಲ್ಲರೂ ಸೇರಿ ಶಿವ ಪೂಜೆ ಸಂಘಟಿಸಲಾಗುತ್ತಿದೆ. 12ನೇ ಶತಮಾನದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶರಣ ಚಳುವಳಿ ವಾತಾವರಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ. ಕಾಯಕದಿಂದ ಸಮಾಜ ಸುಧಾರಣೆ ಮಾಡಿದ 32 ಶಿವಶರಣರ ಪ್ರತಿಕೃತಿಗಳ ಲಿಂಗ ಪೂಜೆ ಮಂಟಪ ಸಜ್ಜುಗೊಳಿಸಲಾಗುತ್ತಿದೆ. ಮಹಾಶಿವರಾತ್ರಿ ಭಕ್ತ ಬಳಗದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮೇಯರ್ ಬಿ.ಜಿ. ಅಜಯ್ಕುಮಾರ್ ವಹಿಸುವರು.
16 ಸಂಘಟನೆಗಳು ಭಾಗಿ : ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಬಸವ ಬಳಗ, ಅನುಭವ ಮಂಟಪ, ವಿಶ್ವ ಮಾನವ ಮಂಟಪ, ಒಕ್ಕಲಿಗ ಮುದ್ದಣ್ಣ ಅನುಭಾವ ಪೀಠ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ, ಸಾವಿತ್ರಿ ಬಾಪುಲೆ ಶಿಕ್ಷಕಿಯರ ಸಂಘ, ಭೋವಿ ಯುವ ವೇದಿಕೆ, ಯೋಗ ಫೆಡರೇಶನ್, ಬಸವ ಕಲಾಲೋಕ, ಸ್ನೇಹಜೀವಿ ಮಹಿಳಾ ಮಂಡಳಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹೀಗೆ ಎಲ್ಲರೂ ಸೇರಿ ಮಹಾ ಶಿವರಾತ್ರಿ ಭಕ್ತಿ ಬಳಗದ ಅಡಿಯಲ್ಲಿ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ವಿವರಕ್ಕೆ ರವಿ ಕುಮಾರ್ (9916287614), ಧನುಷ್ (90196 67115) ಅವರನ್ನು ಸಂಪರ್ಕಿಸಬಹುದು.