`ಸ್ಮಾರ್ಟ್’ ಉದ್ದೇಶ ಮರೆತು ಮುಗಿದ ಯೋಜನೆ

ದಾವಣಗೆರೆ, ಫೆ. 15 – ದೇಶದ 100 ಸ್ಮಾರ್ಟ್ ಸಿಟಿ ಯೋಜನೆಗಳು ಈಗ ಮುಕ್ತಾಯವಾಗುವ ಹಂತಕ್ಕೆ ಬಂದಿವೆ. 22 ಸ್ಮಾರ್ಟ್ ನಗರಗಳ ಯೋಜನೆಗಳು ಮುಂದಿನ ತಿಂಗಳು ಮುಗಿಯಲಿವೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ ಸ್ಮಾರ್ಟ್ ನಗರಗಳ ಯೋಜನೆಗಳನ್ನೂ ಇನ್ನೂ ಮೂರ್ನಾಲ್ಕು ತಿಂಗಳ ಒಳಗೆ ಪೂರೈಸುವಂತೆ ಸೂಚನೆ ನೀಡಲಾಗಿದೆ.

ಆದರೆ, ಸ್ಮಾರ್ಟ್ ಸಿಟಿ ಯೋಜನೆಗಳು ಈಡೇರಿವೆಯೇ? ಸ್ಮಾರ್ಟ್ ಸಿಟಿಯ ವೈಫಲ್ಯದ ಬಗ್ಗೆ ಯೋಚಿಸಿದರೆ, ಕೆಲಸ ಮಾಡದ ಸ್ಮಾರ್ಟ್ ಶೌಚಾಲಯಗಳು, ಓಡದ ಸೈಕಲ್‌ಗಳು, ಕೆಲಸ ಮಾಡದ ಉಚಿತ ವೈ – ಫೈ ಯೋಜನೆ… ಹೀಗೆ ಹಲವಾರು ಯೋಜನೆಗಳು ನೆನಪಿಗೆ ಬರಬಹುದು.

ಇವಾವೂ ಸ್ಮಾರ್ಟ್ ಸಿಟಿಯ ನಿಜವಾದ ವೈಫಲ್ಯಗಳಲ್ಲ. ಸ್ಮಾರ್ಟ್ ಸಿಟಿಯ ನಿಜವಾದ ವೈಫಲ್ಯ ಇರುವುದು ಕೈಗೊಂಡ ಕಾಮಗಾರಿಗಳಲ್ಲಿ ಅಲ್ಲ, ಕೈಗೊಳ್ಳದೇ ಇರುವ ಕಾಮಗಾರಿಗಳಲ್ಲಿ! ಭಾರತದ ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಉದ್ದೇಶ, `ನಗರಗಳನ್ನು ಸುಸ್ಥಿರ ಜೀವನಕ್ಕಾಗಿ ಸಜ್ಜುಗೊಳಿಸಲು. ಬದುಕಲು ಸೂಕ್ತವಾದ, ಸುಸ್ಥಿರ ಹಾಗೂ ಚೈತನ್ಯಯುಕ್ತ ಆರ್ಥಿಕತೆಯ ಮೂಲಕ ಜನರು ತಮ್ಮ ವೈವಿಧ್ಯ ಆಸಕ್ತಿಗಳಲ್ಲಿ ಅವಕಾಶ ಕಂಡುಕೊಳ್ಳಲು’ ಎಂದು ಸ್ಮಾರ್ಟ್ ಸಿಟಿಯ ವೆಬ್ ತಾಣ ತಿಳಿಸುತ್ತದೆ. ನಗರ ಪ್ರದೇಶಗಳಲ್ಲಿ ಯೋಜನೆ ರಹಿತವಾಗಿರುವ ಪ್ರದೇಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದು, ವಸತಿ ಸೌಲಭ್ಯ ಕಲ್ಪಿಸುವುದು, ಪಾದಚಾರಿ ಹಾಗೂ ಸೈಕಲ್ ಸವಾರರಿಗೆ ಸೂಕ್ತ ರಸ್ತೆಗಳ ನಿರ್ಮಾಣ, ನಾಗರಿಕ ಸ್ನೇಹಿ ಆಡಳಿತ ರೂಪಿಸುವುದು, ನಗರ ಪಾಲಿಕೆಗಳಿಗೆ ಅಲೆಯದೇ ಕುಳಿತಲ್ಲಿಯೇ ಆನ್‌ಲೈನ್‌ ಮೂಲಕ ಸೌಲಭ್ಯಗಳು ಸಿಗುವಂತೆ ಮಾಡುವುದು, ಆರೋಗ್ಯ ಹಾಗೂ ಶಿಕ್ಷಣ ರೀತಿಯ ಸೌಲಭ್ಯಗಳಿಗೆ ಉತ್ತೇಜನ ನೀಡುವುದು ಇತ್ಯಾದಿ ಇತ್ಯಾದಿ. ಅಂದ ಹಾಗೆ, ಮಂಡಕ್ಕಿ ಭಟ್ಟಿ ಪ್ರದೇಶವನ್ನು ಪುನರಭಿವೃದ್ಧಿ ಗೊಳಿಸುವುದೇ ಸ್ಮಾರ್ಟ್‌ ಯೋಜನೆಯ ಪ್ರಮುಖ ಗುರಿಯಾಗಿತ್ತು. ನಂತರ ಮಂಡಕ್ಕಿ ಭಟ್ಟಿಯನ್ನೇ ಯೋಜನೆಯಿಂದ ಕೈ ಬಿಡಲಾಯಿತು‍.

ಆಧುನಿಕ ನಗರದ ಜನತೆಯ ದೊಡ್ಡ ಸಮಸ್ಯೆಗಳೆಂದರೆ ಉದ್ಯೋಗ, ವಸತಿ, ಶಿಕ್ಷಣ ಹಾಗೂ ಆರೋಗ್ಯ. ಇವುಗಳಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಅದರಲ್ಲೂ ಕೊರೊನಾ ಕಾಲ ಆರೋಗ್ಯ ಮತ್ತು ಶಿಕ್ಷಣಕ್ಕೆ ತಂದಿಟ್ಟ ಸಮಸ್ಯೆ ಒಂದೆರಡಲ್ಲ. ಈ ಸಮಸ್ಯೆಗಳಿಗೆ ಸ್ಮಾರ್ಟ್ ಉತ್ತರ ಸಿಕ್ಕಿತೇ?

ನಗರಗಳಲ್ಲಿ ಒಂದು ಬೆಚ್ಚನೆಯ ಗೂಡು ಕಂಡುಕೊಳ್ಳುವುದು ಸುಲಭದ ಮಾತಲ್ಲ. ಎಷ್ಟೋ ಜನರ ಆಯುಷ್ಯವೇ ಸವೆದು ಹೋದರೂ ಒಂದು ಸೂರು ಸಿಗದು. ಸರ್ಕಾರಿ ಶಿಕ್ಷಣ ಸರಿ ಇಲ್ಲ ಎಂದು ಖಾಸಗಿ ಮೊರೆ ಹೋದವರು ಅಲ್ಲಿ ಶುಲ್ಕ ಪಾವತಿಸಲು ಹೆಣಗಾಡುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಇಲ್ಲದೇ ಅದೆಂತಹ ಸ್ಮಾರ್ಟ್ ನಗರ ನಿರ್ಮಾಣ ಸಾಧ್ಯ?

ಸ್ಮಾರ್ಟ್ ಸಿಟಿಯ ಆರಂಭದ ದಿನಗಳ ಪ್ರಚಾರ ಎಷ್ಟರ ಮಟ್ಟಿಗೆ ಆಯಿತು ಎಂದರೆ, ನಗರದಲ್ಲಿ ಏನೇ ಕಾಮಗಾರಿ ನಡೆದರು ಅದು ಸ್ಮಾರ್ಟ್ ಸಿಟಿಯದ್ದೇ ಎಂದು ಜನ ಭಾವಿಸುವಂತಾಯಿತು. ಆದರೆ, ಯಾವುದೇ ಕಾಮಗಾರಿಗಳಲ್ಲಿ ಏನೇ ಸಮಸ್ಯೆಯಾದರೂ ಸ್ಮಾರ್ಟ್ ಸಿಟಿಯನ್ನೇ ದೂರುವಂತಾಗಿದ್ದು ಬೇರೆ ಮಾತು.

ಸ್ಮಾರ್ಟ್ ಸಿಟಿ ಅವಧಿ ಮುಗಿದ ನಂತರ, ಈ ಯೋಜನೆ ಮೂಲಕ ಕಲ್ಪಿಸಿರುವ ಸೌಲಭ್ಯಗಳನ್ನು ಏನು ಮಾಡಲಾಗುವುದು ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಜನ ಬಳಸದ ಸೈಕಲ್, ಕೆಲಸಕ್ಕೆ ಬಾರದ ಸ್ಮಾರ್ಟ್ ಶೌಚಾಲಯಗಳನ್ನು ಮುಂದುವರೆಸಲು ಯಾರು ಹಣ ಕೊಡುತ್ತಾರೆ? ಎಂಬುದು ಗೊತ್ತಾಗುತ್ತಿಲ್ಲ.

ಒಟ್ಟಾರೆ, ನಗರಗಳಲ್ಲಿ ನಾಗರಿಕರಿಗೆ ಸುಸ್ಥಿರ ಜೀವನ ನೀಡುವ ಬೃಹತ್ ಕನಸಿನೊಂದಿಗೆ ಬಂದ ಸ್ಮಾರ್ಟ್ ಸಿಟಿಯ ಮೂಲ ಉದ್ದೇಶಗಳು ಈಡೇರುವುದಿರಲಿ, ಆ ಉದ್ದೇಶಗಳ ಬಗ್ಗೆಯೇ ಗಮನ ಹರಿಸಲಿಲ್ಲ ಎಂಬ ಅಭಿಪ್ರಾಯ ಬಂದರೆ ತಪ್ಪೇನೂ ಇಲ್ಲ. ಸ್ಮಾರ್ಟ್ ಸಿಟಿಯ ಮೂಲ ಉದ್ದೇಶ ಈಡೇರಿಕೆಗೆ ಈಗ ಇನ್ನೊಂದು ಸ್ಮಾರ್ಟ್ ಯೋಜನೆಗೆ ಕಾಯಬೇಕಿದೆ ಅಷ್ಟೇ.

error: Content is protected !!