ಹೊನ್ನಾಳಿ, ಫೆ. 12- 100 ಹಾಸಿಗೆ ಇದ್ದ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆ ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಭಿನಂದಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು, ಈ ಹಿಂದೆ 30 ಹಾಸಿಗೆ ಇದ್ದ ಸಾರ್ವಜನಿಕ ಆಸ್ಪತ್ರೆಯನ್ನು ಅಂದಿನ ಹಣಕಾಸು ಸಚಿವರು, ಉಪಮುಖ್ಯಮಂತ್ರಿ ಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಹಾಗೂ ಆರೋಗ್ಯ ಸಚಿವರಾಗಿದ್ದ ಆರ್. ಅಶೋಕ್ ಅವರು 100 ಹಾಸಿಗೆ ಆಸ್ಪತ್ರೆಯನ್ನಾಗಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿದ್ದರು ಎಂದರು.
ಸಚಿವ ಸಂಪುಟ ಸಭೆಯಲ್ಲಿ 100 ಹಾಸಿಗೆ ಇದ್ದ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ 23.50 ಕೋಟಿ ಅನುದಾನ ಬಿಡುಗಡೆ ಮಾಡಿ, ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ 23 ಐಸಿಯು ಬೆಡ್‍ಗಳನ್ನು ಸಿದ್ದಪಡಿ ಸಲಾಗುತ್ತಿದೆ. ಅಲ್ಲದೇ, ಒಂದು ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ ಐವತ್ತು ಲಕ್ಷ ವೆಚ್ಚದಲ್ಲಿ ಎಲ್‍ಎಂಓ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
10 ಹಾಸಿಗೆ ಇದ್ದ ನ್ಯಾಮತಿ ತಾಲ್ಲೂಕು ಆಸ್ಪತ್ರೆಯನ್ನು ನಾಲ್ಕು ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇ ರಿಸಿದ್ದು, ಈಗ 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.