ದಾವಣಗೆರೆ, ಫೆ.10- ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಶಿರಮಗೊಂಡನಹಳ್ಳಿ ರಿ.ಸ.ನಂ.57 ಹಾಗೂ 62ರ ಪ್ರದೇಶದಲ್ಲಿನ 8 ಎಕರೆ 16 ಗುಂಟೆಯ ಸುಮಾರು 25 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತು ಕಂಡವರ ಪಾಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಹೆಚ್.ಆರ್. ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಿ ಜಾಗವನ್ನು ಮುಂದಿನ ಏಳು ದಿನಗಳಲ್ಲಿ ಬಂದೋಬಸ್ತ್ ಮಾಡದೇ ಇದ್ದರೆ ಪಾಲಿಕೆ ಆಯುಕ್ತರ ಮೇಲೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕ ದ್ದಮೆ ಹೂಡುವುದಾಗಿ ಹೇಳಿದರು.
ಶಿರಮಗೊಂಡನಹಳ್ಳಿ ರಿ.ಸ.ನಂ.57 ಹಾಗೂ 62ರ ಪ್ರದೇಶಕ್ಕೆ 1977ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರಲ್ಲಿ ಹಾಗೂ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಂತಿಮ ಅನುಮೋದಿತ ವಿನ್ಯಾಸ ನಕ್ಷೆ ಸಿದ್ಧಪಡಿಸಲಾಗಿದೆ. ಇಂದಿನವರೆಗೂ ಈ ವಿನ್ಯಾಸವನ್ನು ಯಾವುದೇ ರೀತಿ ಮಾರ್ಪಡಿಸಿಲ್ಲ.
ಆದರೆ ಅನುಮೋದಿತ ನಕ್ಷೆಯಲ್ಲಿ ಸಿದ್ಧಪಡಿಸಿರುವ 238 ಸೈಟುಗಳನ್ನು ಹೊರತುಪಡಿಸಿ, ಪಂಚಾಯ್ತಿಯ ಜಾಗ, ಶಾಪಿಂಗ್ ಕಾಂಪ್ಲೆಕ್ಸ್ ಜಾಗ, ಬ್ಯಾಂಕ್ ಜಾಗ, ಕೋ ಆಪರೇಟಿವ್ ಸೊಸೈಟಿ ಜಾಗ, ಪ್ಲೇ ಗ್ರೌಂಡ್, ಪಾರ್ಕ್, ಕಮ್ಯೂನಿಟಿ ಹಾಲ್, ಸರ್ವೀಸ್ ಇಂಡಸ್ಟ್ರೀ ಜಾಗವನ್ನು ಹೆಚ್ಚುವರಿಯಾಗಿ 280 ಸೈಟ್‌ಗಳನ್ನಾಗಿ ಮಾಡಿ ಹಲವರ ಹೆಸರಿಗೆ ಖಾತೆ ಮಾಡಲಾಗಿದೆ ಎಂದು ಆರೋಪಿಸಿದರು.
ಕಂದಾಯ ಅಧಿಕಾರಿಗಳನ್ನು ಕೇಳಿದರೆ `ದೊಡ್ಡವರು ಹೇಳಿದಂತೆ ಮಾಡಿದ್ದೇವೆ’ ಎನ್ನುತ್ತಿದ್ದಾರೆ. ದೊಡ್ಡವರು ಯಾರೆಂದು ತಿಳಿಯಬೇಕಿದೆ ಎಂದು ಹೇಳಿದರು. ಕೂಡಲೇ ಎಲ್ಲಾ ಖಾತೆಗಳನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಆಯುಕ್ತರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ವೀರಾಚಾರ್ ಉಪಸ್ಥಿತರಿದ್ದರು.