ರೈತರ ಬಂಡವಾಳ, ಆದಾಯದ ಕೃಷಿ ಅಧ್ಯಯನದಲ್ಲಿ ಸರ್ಕಾರಗಳು ಸಂಪೂರ್ಣ ವಿಫಲ

ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ರೈತ ಗೋಷ್ಠಿಯಲ್ಲಿ ರೈತ ಮುಖಂಡ ವೀರಸಂಗಯ್ಯ ಬೇಸರ

ಹರಿಹರ, ಫೆ.10- ರಾಜ್ಯದಲ್ಲಿ ರೈತರ ಬಂಡವಾಳ ಮತ್ತು ಆದಾಯದ ಬಗ್ಗೆ ತಿಳಿಯುವಂತಹ ಕೃಷಿ ಅಧ್ಯಯನ ನಡೆಸುವಲ್ಲಿ ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಬೇಸರ ವ್ಯಕ್ತಪಡಿಸಿದರು.

ಅವರು, ಗುರುವಾರ ಹರಿಹರ ತಾಲ್ಲೂಕು ರಾಜನಹಳ್ಳಿಯ್ಲಲಿನ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರೈತ ಗೋಷ್ಟಿಯಲ್ಲಿ ಪ್ರಸ್ತುತ ಕೃಷಿ ಬಿಕ್ಕಟ್ಟು ಮತ್ತು ಪರಿಹಾರಗಳ ಕುರಿತು ಉಪನ್ಯಾಸ ನೀಡಿದರು.

ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ 46 ಕೃಷಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳಿದ್ದು, ಇವುಗಳು ಕೇವಲ ಕೃಷಿ ತಳಿಗಳನ್ನು ಅಷ್ಟೇ ಕಂಡು ಹಿಡಿದವೇ ವಿನಃ ಭತ್ತ, ಶೇಂಗಾ ಸೇರಿದಂತೆ ಬೆಳೆಗಳಿಗೆ ಖರ್ಚು ಎಷ್ಟು ? ರೈತರು ಎಷ್ಟು  ಬಂಡವಾಳ ಹೂಡುತ್ತಾರೆ ? ಎಂಬ ಲೆಕ್ಕಾಚಾರವನ್ನು ಇವತ್ತಿಗೂ ರಾಜ್ಯದ ವಿವಿಗಳಷ್ಟೇ ಅಲ್ಲದೇ ಭಾರತದಲ್ಲಿರುವಂತ 500ಕ್ಕೂ ಹೆಚ್ಚು ಕೃಷಿಗೆ ಸಂಬಂಧಿಸಿದ ವಿವಿಗಳ ಪ್ರೊಫೆಸರ್‌ಗಳಾಗಲೀ, ಅರ್ಥಶಾಸ್ತ್ರಜ್ಞರು ಅಧ್ಯಯನ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಎಂ.ಎಸ್. ಸ್ವಾಮಿನಾಥನ್ ಆಯೋಗವು ಭಾರತ ದೇಶದ ಉದ್ದಗಲಕ್ಕೂ ಅಧ್ಯಯನ ನಡೆಸಿ, ಭಾರತದ ರೈತರು ಕೃಷಿಗೆ ಹಾಕಿದ ಬಂಡವಾಳದಲ್ಲಿ ಶೇ.18 ರಿಂದ 23 ರಷ್ಟು  ನಷ್ಟದಲ್ಲಿ ವ್ಯಾಪಾರ ಮಾಡುವುದಾಗಿ ವರದಿಯನ್ನು ನೀಡಿತ್ತು. ಇದರ ವರದಿ ಅನುಸಾರ ರೈತರ ಹಿತರಕ್ಷಣೆ, ಕೃಷಿಯ ರಕ್ಷಣೆ ಬಗ್ಗೆ ಸರ್ಕಾರಗಳು ಚಿಂತಿಸಬೇಕು ಎಂದರು.

ರಾಜ್ಯದಲ್ಲಿ ಕೃಷಿ ಭೂಮಿ ಹೊಂದಿದ 87 ಲಕ್ಷ ರೈತ ಕುಟುಂಬ ಇದ್ದು, ಈ ಪೈಕಿ 69 ಲಕ್ಷ ಸಣ್ಣ ಹಿಡುವಳಿದಾರರು, 45 ಲಕ್ಷ ಮಂದಿ ಕೃಷಿ ಪಂಪ್ ಸೆಟ್‌ಗಳ ಅಳವಡಿಸಿಕೊಂಡು ಇವುಗಳ ಮೇಲೆಯೇ ಅವಲಂಬಿತರಾಗಿ 97 ಬೆಳೆಗಳನ್ನು ಬೆಳೆದು ಬದುಕು ಕಂಡುಕೊಳ್ಳುತ್ತಿದ್ದಾರೆ. ಕೃಷಿಯಲ್ಲಿ ಉತ್ಪಾದನೆಯಲ್ಲಿ ಹಿಂದೆ ಬಿದ್ದಿಲ್ಲ. 1977ರಲ್ಲಿ ನಮ್ಮ ದೇಶದಲ್ಲಿ ಎರಡು ಹೊತ್ತು ಊಟ ಸಿಗುತ್ತಿರಲಿಲ್ಲ. ಆಗ ರೈತರು ದೊಡ್ಡ ಆಂದೋಲನ ರೂಪದಲ್ಲಿ ಹಸಿರು ಕ್ರಾಂತಿ ಮುಖೇನ 300 ದಶಲಕ್ಷ ಟನ್ ಆಹಾರ ಉತ್ಪಾದನೆ ಬೆಳೆಯುವಂತಾಗಿದೆ. ದುರಂತವೆಂದರೆ ಹೆಚ್ಚು ಆಹಾರ ಉತ್ಪಾದನೆ ಮಾಡುವ ರೈತರು ಮಾತ್ರ ಶ್ರೀಮಂತರಾಗಿಲ್ಲ ಎಂದು ತಿಳಿಸಿದರು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಓರ್ವ ರೈತನ ಕೃಷಿಯಲ್ಲಿ ಬೆಳೆಗಳಿಗೆ ವ್ಯಯಿಸುವ ಬಂಡವಾಳದ ಖರ್ಚನ್ನು ಲೆಕ್ಕ ಮಾಡಿ ರೈತರಿಗೆ ಆದಾಯದ ಬಗ್ಗೆ ಕಾಳಜಿ ವಹಿಸಿ, ಅಲ್ಲಿನ ಸರ್ಕಾರಗಳು ತೀರ್ಮಾನಿಸಿ ಕೃಷಿ ಮತ್ತು ರೈತರನ್ನು ರಕ್ಷಿಸುವ ಪದ್ಧತಿ ಹೊಂದಿವೆ. ಆದರೆ ಭಾರತದಲ್ಲಿ ಇನ್ನೂ ಇಂತಹ ಪದ್ಧತಿ ಜಾರಿಗೆ ಬಾರದಿರುವುದು ದುರಂತವೇ ಸರಿ. ಈ ಕಾರಣದಿಂದ ಅನೇಕ ಕೃಷಿಕರು ಸಾಲಗಾರರಾಗಿದ್ದಾರಲ್ಲದೇ, 23 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದರು.

error: Content is protected !!