ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಕೋದಂಡರಾಮಯ್ಯ
ಚಿತ್ರದುರ್ಗ, ಫೆ.10- ಕಳೆದ 1960ರ ದಶಕದಿಂದಲೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ರಾಜಕೀಯ ದುರುದ್ಧೇಶದಿಂದ ಕೂಡಿದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಂಸದ ಪಿ.ಕೋದಂಡರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರ ಹೇಳಿಕೆ ನೀಡಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ 5300 ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ. ಅದನ್ನು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಇಳಿಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯೋಜನೆ ಜಾರಿಗೆ ಚಿತ್ರದುರ್ಗ ಜಿಲ್ಲೆಯ ಜನರು, ಸಂಘ-ಸಂಸ್ಥೆಗಳು, ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ದಶಕಗಳ ಕಾಲ ನಡೆಸಿದ ಚಳವಳಿಯೇ ಮುಖ್ಯ ಕಾರಣ ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದಿತ್ತು.
ಎಸ್. ನಿಜಲಿಂಗಪ್ಪ ಅವರು 60ರ ದಶಕದಲ್ಲಿ ಎರಡು ಬಾರಿ ಸಿಎಂ ಆಗಿದ್ದರೂ ಯೋಜನೆ ಜಾರಿಗೆ ಯಾಕೆ ಮುಂದಾಗಲಿಲ್ಲ ಎಂಬ ಅಭಿಪ್ರಾಯ ಜನರ ಮನದಲ್ಲಿ ಈಗಲೂ ಇದೆ. ಅದನ್ನು ತಾವು ನೇರವಾಗಿ ಪ್ರಸ್ತಾಪ ಮಾಡಬಹುದಿತ್ತು. ಆದರೆ, ರಾಜ ಕೀಯ ಕಾರಣಕ್ಕಾಗಿ ಪಕ್ಷವೊಂದರ ವಿರುದ್ಧ ಟೀಕೆಗೆ ಮುಂದಾಗಿರುವುದು ಸರಿಯಲ್ಲ.
ಲೋಕಸಭೆಯಲ್ಲಿ ಈ ಎರಡೂ ಯೋಜನೆಗಳ ಕುರಿತು ಪ್ರಥಮ ಬಾರಿಗೆ ಧ್ವನಿಯೆತ್ತಿ ಸರ್ಕಾರದ ಗಮನ ಸೆಳೆದಿದ್ದೆ, ದುರಾದೃಷ್ಟವಶಾತ್ ಲೋಕಸಭೆ ವಿಸರ್ಜನೆಗೊಂಡ ಪರಿಣಾಮ ಜನಪ್ರತಿನಿಧಿಯಾಗಿ ಲೋಕಸಭೆಯಲ್ಲಿ ಹೋರಾಟ ನಡೆಸುವ ಅವಕಾಶ ನನ್ನ ಕೈತಪ್ಪಿತು. ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಅನಿವಾರ್ಯವಾಗಿ ಜನ ಹೋರಾಟಕ್ಕೆ ಧುಮುಕುವ ಸಂದರ್ಭ ಸೃಷ್ಟಿ ಆಯ್ತು.
ಅದರ ಪರಿಣಾಮ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷನಾಗಿ ಬೀದಿಯಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟ ನಡೆಸಿದ್ದೇನೆ. ಇದಕ್ಕೆ ಜಿಲ್ಲೆಯ ಜನ, ಸಂಘ-ಸಂಸ್ಥೆಗಳ ಮುಖಂಡರು, ಪತ್ರಕರ್ತರು, ಮಠಾಧೀಶರು ಮುಂಚೂಣಿಯಲ್ಲಿ ನಿಂತು ಬೆಂಬಲಿಸಿದ್ದಾರೆ. ಈ ಎಲ್ಲದರ ಫಲ ಯೋಜನೆ ಜಾರಿ ಆಗಿದೆ ಎಂಬುದಷ್ಟೇ ಕಟು ಸತ್ಯ.
ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಎಚ್.ಕೆ.ಪಾಟೀಲ ಅವರೊಂದಿಗೆ ವಿಧಾನಸಭೆಯಲ್ಲಿ ಸಮಿತಿಯು ಹಲವು ಸಭೆ ನಡೆಸಿ ಯೋಜನೆ ಜಾರಿಗೆ ಒತ್ತಾಯಿಸಿತ್ತು. ಮುಖ್ಯವಾಗಿ ಹೋರಾಟ ಸಮಿತಿ ಅಧ್ಯಕ್ಷನಾಗಿ ಅಧ್ಯಯನ ನಡೆಸಿ ನೀರಿನ ಲಭ್ಯತೆ ಕುರಿತು ಎಚ್.ಕೆ.ಪಾಟೀಲ್ ಅವರಿಗೆ ಖಚಿತ ಮಾಹಿತಿ ನೀಡಿದ್ದರ ಪರಿಣಾಮ 2003 ಸೆಪ್ಟೆಂಬರ್ ತಿಂಗಳಲ್ಲಿ ಭದ್ರಾ ಯೋಜನೆ ಜಾರಿಗೆ ಸರ್ಕಾರ ಘೋಷಣೆ ಮಾಡಿತು.
ಬಳಿಕ, ಧರ್ಮಸಿಂಗ್ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಈಗಿನ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಕೂಡ ಯೋಜನೆ ಜಾರಿಗೆ ವಿವಿಧ ಹಂತಗಳಲ್ಲಿ ಸಹಕರಿಸಿದ್ದಾರೆ. ಎಲ್ಲಾ ಪಕ್ಷಗಳು ಯೋಜನೆ ಜಾರಿಗೆ ತಮ್ಮ ತಮ್ಮ ಕಾಲಘಟ್ಟದಲ್ಲಿ ನೀಡಿದ ಕೊಡುಗೆಯನ್ನು ಮರೆಮಾಚುವುದು ಮುಖ್ಯಮಂತ್ರಿ ಹುದ್ದೆಗೆ ಗೌರವ ತರುವುದಿಲ್ಲ. ಜೊತೆಗೆ ಅನಗತ್ಯ ವಿವಾದಕ್ಕೆ ಎಡೆಮಾಡಿಕೊಡುವ ಜೊತೆಗೆ ಜನರ ಹೋರಾಟಕ್ಕೆ ಅಪಮಾನ ಮಾಡಿದಂತೆ ಆಗುತ್ತದೆ ಎಂಬುದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು ಎಂದು ಹೇಳಿರುವ ಕೋದಂಡರಾಮಯ್ಯ, ಸಾಂವಿಧಾನಿಕ ಸ್ಥಾನದಲ್ಲಿರುವವರು ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಲಾಭ ಪಡೆಯಲು ಆಧಾರ ರಹಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.