ದಾವಣಗೆರೆ, ಫೆ.10– ರಾಜ್ಯ ಸರ್ಕಾರ ತಮ್ಮ ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಬಂದಾಗ ರಸ್ತೆಯ ಅಭಿವೃದ್ಧಿಗೆಂದು ಸಾವಿರಾರು ಕೋಟಿ ರೂ.ಗಳನ್ನು ದುಂದು ವೆಚ್ಚ ಮಾಡುತ್ತಿದ್ದು, ಇಂತಹ ಸರ್ಕಾರಕ್ಕೆ ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಹರಪನಹಳ್ಳಿಯಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ ಕಣ್ಣಿಗೆ ಕಾಣದಿರುವುದು ಮಾತ್ರ ಸರ್ಕಾರದ ಕುರುಡುತನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ಬೇಸರ ವ್ಯಕ್ತಪಡಿಸಿದ್ದಾರೆ.
ಗುಲ್ಬರ್ಗದಿಂದ, ಮಂಗಳೂರು, ಉಡುಪಿ, ಧರ್ಮಸ್ಥಳಕ್ಕೆ ಮತ್ತು ಬೆಂಗಳೂರಿನಿಂದ ಹಾಗೂ ಬೆಳಗಾಂ ಮತ್ತು ಹುಬ್ಬಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ಪ್ರತಿದಿನ ಸಾವಿರಾರು ಸರ್ಕಾರಿ ಸಾರಿಗೆ ವಾಹನಗಳು ಹಾಗೂ ಲೆಕ್ಕವಿಲ್ಲದಷ್ಟು ಕಾರ್ ಬೈಕ್ ಗಳು ಓಡಾಡುತ್ತಿದ್ದು, ಇಂತಹ ರಸ್ತೆ ದಾವಣಗೆರೆ ನಗರದ ಒಳಗಿರುವ ಪಿ.ಬಿ. ರಸ್ತೆಯ ಅರ್ಧದಷ್ಟು ಕಿರಿದಾಗಿರುವುದು ಮಾತ್ರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಪ್ರತಿ ಬಾರಿ ಅಪಘಾತ ನಡೆದು ಸಾವು ನೋವು ಅನುಭವಿಸಿದಾಗ, ಸ್ಥಳಕ್ಕೆ ಬರುವ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಶೀಘ್ರವೇ ರಸ್ತೆಯಾಗಲೀಕರಣ ಮಾಡುವ ಭರವಸೆ ನೀಡುತ್ತಾರೆ ವಿನಃ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಿಲ್ಲ.
ಸಾವಿರಾರು ವಾಹನಗಳು ಓಡಾಡುವ ಈ ರಸ್ತೆ ಎಷ್ಟು ಕಿರಿದಾಗಿದೆ ಎಂದರೆ, ಎದುರಿಗೆ ಒಂದು ವಾಹನ ಬಂದರೆ ಇನ್ನೊಬ್ಬರು ತಮ್ಮ ವಾಹನವನ್ನು ರಸ್ತೆಯಿಂದ ಕೆಳಗಿಳಿಸ ಬೇಕು. ಅಂತಹ ಪರಿಸ್ಥಿತಿಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ತಮ್ಮ ವಾಹನ ಚಲಾಯಿಸುತ್ತಾರೆ, ಇನ್ನು ರಾತ್ರಿ ಪ್ರಯಾಣ ವಂತು ಯಮಧರ್ಮರಾಯನ ಜೊತೆ `ಜೂಟ್ ಆಟ’ ಆಡಿದಂತೆ ಎಂದು ಹರೀಶ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.