ಮಲೇಬೆನ್ನೂರು : ಪಾಠ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಶಿಕ್ಷಕ

ಮಲೇಬೆನ್ನೂರು, ಫೆ.6 – ತರಗತಿ ಪಾಠ ಮಾಡುತ್ತಿರುವಾಗ ಶಿಕ್ಷಕರೊಬ್ಬರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ಭಾನುವಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್. ವಿಜಯ್‌ಕುಮಾರ್ (54 ವರ್ಷ) ಮೃತಪಟ್ಟ ವ್ಯಕ್ತಿಯಾಗಿರುತ್ತಾನೆ.

ಕಳೆದ 1 ವರ್ಷ 3 ತಿಂಗಳಿನಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯ್‌ಕುಮಾರ್ ಅವರು ,ಸೋಮವಾರ ಬೆಳಿಗ್ಗೆ ಶಾಲೆಗೆ ಬಂದು ಪ್ರಾರ್ಥನೆಯಲ್ಲಿ ಭಾಗವಹಿಸಿ, ನಂತರ ಪಾಠ ಮಾಡಲು ತರಗತಿಗೆ ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.  ತಕ್ಷಣ ವಿದ್ಯಾರ್ಥಿಗಳು ಹೋಗಿ ಮುಖ್ಯ ಶಿಕ್ಷಕ ಹನುಮಂತಪ್ಪ ಅವರಿಗೆ ತಿಳಿಸಿದಾಗ ಕೂಡಲೇ ವಿಜಯ್‌ಕುಮಾರ್ ಅವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಹೃದಯ ಬಡಿತ ನಿಂತು ಹೋಗಿತ್ತು ಎನ್ನಲಾಗಿದೆ. 

ನಂತರ ವಿಜಯ್‌ಕುಮಾರ್ ಮೃತ ದೇಹವನ್ನು ಕೆಲಹೊತ್ತು ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಲ್ಲಿ ದುಃಖ ಮಡು ಗಟ್ಟಿತ್ತು. ವಿಷಯ ಗೊತ್ತಾದ ತಕ್ಷಣ ಶಾಲೆಗೆ ಬಂದ ಮೃತರ ಪತ್ನಿ, ಮಕ್ಕಳು ಹಾಗೂ ಬಂಧು-ಮಿತ್ರರ ಆಕ್ರಂದನ ಮುಗಿಲು ಮುಟ್ಟಿತ್ತು.

ಬಿ.ಇ.ಓ ಹನುಮಂತಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೆಚ್. ಚಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಶಾಲೆಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. 

ಸೋಮವಾರ ಸಂಜೆ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕಿನ ಆರನೇಕಲ್ಲು ಹತ್ತಿರ ಮಹಾ ದೇವಪುರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.

ಮೆಚ್ಚುಗೆ : ಶಿಕ್ಷಕ ವಿಜಯ್‌ಕುಮಾರ್‌ ಅವರ ಪಾಠ, ಪ್ರವಚನ ಹಾಗೂ ಅವರ ನಡೆ-ನುಡಿ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದರು.

error: Content is protected !!