ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಇರಲಿ

ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಇರಲಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಲಹೆ

ದಾವಣಗೆರೆ, ಫೆ.1- ಮಕ್ಕಳಿಗೆ ಕೇವಲ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದರೆ ಸಾಲದು  ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ  ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ  ಜರುಗಿದ ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳ ಆರೋಗ್ಯ ರಕ್ಷಣೆ ತಾಯಿಯ ಗರ್ಭದಿಂದಲೇ ಆರಂಭವಾಗಬೇಕು ಪೌಷ್ಟಿಕ ಆಹಾರವನ್ನು ತಾಯಿ ಮತ್ತು ಮಗುವಿಗೆ ನೀಡಬೇಕು. ಮಕ್ಕಳು ಸಮಾಜದ ಆಸ್ತಿಗಳು. ಶಾಲೆ ಬಿಟ್ಟ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರಲು ಪೂರಕ ಚಟುವಟಿಕೆಗಳನ್ನು ನಡೆಸಬೇಕು ಹಾಗೂ ಹದಿಹರೆಯದ ಮಕ್ಕಳಿಗೆ ಬೇಕಾದಂತಹ ತಿಳುವಳಿಕೆ ತರಗತಿಗಳನ್ನು ನಡೆಸುವುದು ಮತ್ತು. ವೈಯಕ್ತಿಕವಾಗಿ ಸಂದರ್ಶಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿನ ಬಾಲಕಾರ್ಮಿಕ ಮಕ್ಕಳನ್ನು ತಾಲೂಕುವಾರು ಪಟ್ಟಿ ಮಾಡಿ ಅವರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ವಲಸೆ ಕಾರ್ಮಿಕರ ಮಕ್ಕಳಿಗೆ ಆಶ್ರಯ  ನೀಡಿ, ಅವರು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಗಟ್ಟುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಗಳಲ್ಲಿ ಮಕ್ಕಳ ನ್ಯೂನತೆಗಳನ್ನು ಕಂಡುಹಿಡಿಯಲು ತಜ್ಞ ವೈದ್ಯರುಗಳನ್ನು  ನೇಮಿಸಲಾಗಿದೆ. ಕೋವಿಡ್ ಸೋಂಕಿತರಿಗೆ ವ್ಯವಸ್ಥಿತ ಚಿಕಿತ್ಸೆ ಹಾಗೂ ಕೋವಿಡ್ ಲಸಿಕೆಗಳನ್ನು ನೀಡುತ್ತಿದ್ದೇವೆ. ಅಂಗನವಾಡಿ ಹಾಗೂ ಶಾಲೆಗಳಿಗೆ ವರ್ಷದಲ್ಲಿ ಎರಡು ಬಾರಿ ಮಕ್ಕಳ ಆರೋಗ್ಯ ತಪಾಸಣೆಯನ್ನು ರಾಷ್ಟ್ರೀಯ ಬಾಲ ಸಂಸ್ಥೆ ಕಾರ್ಯಕ್ರಮದ ಮೂಲಕ ಕೈಗೊಂಡಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಹತ್ತನೇ ತರಗತಿ ಒಳಗಿನ  ಮಕ್ಕಳನ್ನು ಶಿಕ್ಷಣ ಇಲಾಖೆ ಗುರುತಿಸಿ ಅವರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯ  ಪ್ರವೃತ್ತರಾಗಬೇಕು. ಗ್ರಾಮ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತರು ಕಟ್ಟುನಿಟ್ಟಾದ ವರದಿಯನ್ನು ನೀಡಬೇಕು. ಆಗ ಮಾತ್ರ ಶಿಕ್ಷಣದಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಸುಲಭವಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ. ಚನ್ನಪ್ಪ  ಮಾತನಾಡಿ, ಗ್ರಾಮ ಪಂಚಾಯಿತಿ ಗ್ರಂಥಾಲಯ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಸವರಾಜ್ ಬಸರಗಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರಮಾನಾಯಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಡಿ.ಡಿ.ಪಿ.ಐ ತಿಪ್ಪೇಶಪ್ಪ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!