ಫೆ.6ರಂದು ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಡಯಾಲಿಸಿಸ್ ಘಟಕ ಉದ್ಘಾಟನೆ

ದಾವಣಗೆರೆ, ಫೆ.2- ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಡಯಾಲಿಸಿಸ್ ಘಟಕಗಳ ಉದ್ಘಾಟನಾ ಕಾರ್ಯಕ್ರಮ ಇದೇ ಫೆ.6ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಬಾಪೂಜಿ ಆಸ್ಪತ್ರೆ ನಿರ್ದೇಶಕ ಡಾ.ಕುಮಾರ್ ಡಿ.ಎಸ್.,  ಹೆಚ್ಚುವರಿ ಡಯಾ ಲಿಸಿಸ್ ಘಟಕಗಳನ್ನು ಶಾಸಕ ಡಾ.ಶಾಮ ನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

2021ರಂದು ಸ್ಥಾಪಿಸಲಾದ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಜಾತಿ ಧರ್ಮದ ತಾರತಮ್ಯವಿಲ್ಲದೆ ವಿವಿಧ ವರ್ಗದ ಜನರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 2025 ಬಾರಿ ಡಯಾಲಿಸಿಸ್‌ ಸೇವೆ ಒದಗಿಸಲಾಗಿದೆ. 4 ಡಯಾಲಿಸ್ ಯಂತ್ರಗಳ ಜೊತೆಗೆ ಇದೀಗ ಮತ್ತೆ 4 ಯಂತ್ರಗಳನ್ನು ಸೇರಿಸಲಾಗುತ್ತಿದೆ ಎಂದು ಹೇಳಿದರು.

ಗರ್ಭಿಣಿಯರಿಗೆ ಟ್ರಸ್ಟ್ ಅಡಿಯಲ್ಲಿ ರಕ್ತ, ಮೂತ್ರ ಪರೀಕ್ಷೆ, 2 ಬಾರಿ ಅಲ್ಟ್ರಾ ಸೌಂಡ್, ತಜ್ಞ ವೈದ್ಯರಿಂದ ಸಮಾಲೋಚನೆ, ಹಿರಿಗೆ ಸೇವೆ, ಶಿಶುವಿನ ಆರೈಕೆ ಸೇವೆ ಉಚಿತವಾಗಿ ನೀಡಲಾಗುತ್ತಿದೆ. 150ಕ್ಕೂ ಹೆಚ್ಚು ಗರ್ಭಿಣಿಯರು ಸೇವೆ ಬಳಸಿಕೊಂಡಿದ್ದಾರೆ.

 600 ಮಹಿಳೆಯರು ಸ್ತನ ಕ್ಯಾನ್ಸರ್ ಹಾಗೂ 460 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ಒಳಗಾಗಿದ್ದಾರೆ. 143 ಮಹಿಳೆಯರಿಗೆ ಬಾಪೂಜಿ ಹಾಗೂ ಎಸ್.ಎಸ್. ಆಸ್ಪತ್ರೆಯಲ್ಲಿ ಉಚಿತ ತನಿಖೆ ಹಾಗೂ ಸಮಾಲೋಚನೆ ಒದಗಿಸಲಾಗಿದೆ. 350 ಮಹಿಳೆಯರು ಜೀವರಕ್ಷಕ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಪಡೆಿದಿದ್ದಾರೆ ಎಂದರು.

ಇಸಿಜಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿದ್ದು, 3500ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ. 700 ಜನರಿಗೆ ಚಿಕಿತ್ಸೆ ನೀಡಲಾಗಿದೆ. 1500 ವಯಸ್ಕರು ಸಕ್ಕರೆ ಪರೀಕ್ಷೆ, ಬಿಪಿ ಹಾಗೂ ಕಣ್ಣಿನ ವಕ್ರೀಕಾರಕ ದೋಷ ತಪಾಸಣೆ ಸೇವೆ ಪಡೆದಿದ್ದಾರೆ ಎಂದರು. 2000 ಜನರಿಗೆ ದಂತ ಪರೀಕ್ಷೆ ನಡೆಸಲಾಗಿದ್ದು, 280 ಜನರು ಬಾಪೂಜಿ ಡೆಂಟಲ್ ಕಾಲೇಜು ಹಾಗೂ ಕಾಲೇಡ್ ಅಫ್ ಡೆಂಟಲ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 

ಕಳೆದ ವರ್ಷ ಎಸ್.ಎಸ್. ಕೇರ್ ಟ್ರಸ್ಟ್ ಅಡಿಯಲ್ಲಿ ಬಾಪೂಜಿ ಹಾಗೂ ಎಸ್.ಎಸ್. ಆಸ್ಪತ್ರೆಗಳಲ್ಲಿ 1500ಕ್ಕಿಂತ ಹೆಚ್ಚು ರೋಗಿಗಳಿಗೆ ಉಚಿತ ಹೊರ ರೋಗಿಗಳ ಸೇವೆ ಹಾಗೂ 330 ರೋಗಿಗಳಿಗೆ ಉಚಿತ ಹೆರಿಗೆ ಸೇವೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳು ಸೇರಿದಂತೆ ಒಳ ರೋಗಿ ಸೇವೆಗಳನ್ನು ಒದಗಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಮಕ್ಕಳ ತಜ್ಞ ಡಾ.ಮೂಗನಗೌಡ ಮಾತನಾಡುತ್ತಾ, ಟ್ರಸ್ಟ್ ವತಿಯಿಂದ 3-6 ವರ್ಷದ 700ಕ್ಕೂ ಹೆಚ್ಚು ಮಕ್ಕಳಲ್ಲಿ ರಕ್ತಹೀನತೆ ಪೌಷ್ಟಿಕಾಂಶದ ಮೌಲ್ಯಮಾಪನ ತಪಾಸಣೆ ನಡೆಸಲಾಗಿದೆ. 450ಕ್ಕೂ ಹೆಚ್ಚು ಶಾಲಾ ಬಾಲಕಿಯರು ಪಿಸಿಒಎಸ್‌ಗಾಗಿ ತಪಾಸಣೆಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ಬಿ. ಮುರುಗೇಶ್, ಟ್ರಸ್ಟ್ ವತಿಯಿಂದ ಆರೋಗ್ಯ ಸೇವೆ ಜೊತೆಗೆ ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

ಟ್ರಸ್ಟ್‌ನ ಕೋ ಅರ್ಡಿನೇಟರ್ ಡಾ.ಧನ್ಯಕುಮಾರ್, ಬಾಪೂಜಿ ಆಸ್ಪತ್ರೆಯ ಡಾ. ಬಿ.ಎಂ. ಬಸವರಾಜ್, ಗೋಪಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!