ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ತಂತ್ರಜ್ಞಾನ ಕಲಿಕೆ ಅವಶ್ಯ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ತಂತ್ರಜ್ಞಾನ ಕಲಿಕೆ ಅವಶ್ಯ

ಕೃಷಿ ಮೇಳದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

ದಾವಣಗೆರೆ, ಫೆ.3- ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯ ತಂತ್ರಜ್ಞಾನ ಕಲಿಸಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಲಾಭಗಳಿಕೆಯತ್ತ ಕೊಂಡೊಯ್ದು ಉದ್ದಿಮೆದಾರರನ್ನಾಗಿ ಮಾಡುವ ಹೊಣೆಗಾರಿಕೆ ಸರ್ಕಾರ ಹಾಗೂ ಕೃಷಿ ಸಂಬಂಧಿ ಸಂಘ-ಸಂಸ್ಥೆಗಳ ಮೇಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅಭಿಪ್ರಾಯಪಟ್ಟರು.

ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮೈಕ್ರೋಬಿ ಫೌಂಡೇಶನ್ ಮತ್ತು ಯು.ಎಸ್.ಕಮ್ಯುನಿಕೇಶನ್ಸ್ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಸಾಯಿಲ್ (ದ್ರವರೂಪದ ಜೈವಿಕ ಗೊಬ್ಬರ) ಪ್ರಾಯೋಜಕತ್ವದ ಕೃಷಿಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಎನ್ನುವುದು ಒಂದು ಸಂಸ್ಕೃತಿ. ಹಿಂದಿನ ಒಕ್ಕಲುತನ ಹಣವಿಲ್ಲದಿದ್ದರೂ ಸಲೀಸಾಗಿ ನಡೆಯುತ್ತಿತ್ತು. ಆ ದಿನಗಳಲ್ಲಿ ಅನ್ನದಾತನ ಬದುಕು ಹಸನಾಗಿತ್ತು. ಆದರೀಗ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಂಕಷ್ಟಕ್ಕೀಡಾಗಿದ್ದಾನೆ. ಕೃಷಿ ಕ್ಷೇತ್ರದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾನೆ ಎಂದರು.

ಹಿಂದೆ ಸಾವಯವ ಕೃಷಿಯನ್ನು ಅವಲಂಬಿಸಿದ ರೈತರು ನೆಮ್ಮದಿ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್, ಸಹಕಾರ ಸಂಘಗಳಿಂದ ಸಾಲ, ರಸಗೊಬ್ಬರ, ಕೀಟನಾಶಕಗಳು, ಹೈಬ್ರೀಡ್ ಬೀಜಗಳನ್ನು ಕೊಡಿಸುವ ಮೂಲಕ ಹೆಚ್ಚು ಉತ್ಪನ್ನ ಬೆಳೆಯುವಂತೆ ಮಾಡುತ್ತೇವೆಂದು ರೈತರನ್ನು ದಾರಿ ತಪ್ಪಿಸುತ್ತಿರುವುದು ಇಂದಿನ ಸರ್ಕಾರಗಳೇ ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡಿವೆ ಎಂದು ಹೇಳಿದರು.

ರೈತ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಯ ತಂತ್ರಜ್ಞಾನ ಕಲಿಸುವ ಜೊತೆಗೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಯೊಂದಿಗೆ ಲಾಭಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟಾಗ ಮಾತ್ರ ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ಎಂದರು.

ಕೃಷಿ ಇಲಾಖೆ ಉಪನಿರ್ದೇಶಕ ಡಾ. ತಿಪ್ಪೇಸ್ವಾಮಿ ಮಾತನಾಡಿ, ಕೃಷಿ ಮೇಳದಲ್ಲಿ ಕೃಷಿಗೆ ಪೂರಕವಾದ ಮತ್ತು ರೈತರಿಗೆ ಅನುಕೂಲವಾಗುವ ಕೃಷಿ ಪರಿಕರಗಳು,  ಇತರೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರು ಬೆಳೆಯುವ ಸಿರಿಧಾನ್ಯಗಳಿಗೆ ಮೌಲ್ಯವರ್ಧನೆ ಮಾಡಿ ರೈತರನ್ನು ಪ್ರೋತ್ಸಾಹಿಸಲು ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 19 ರೈತ ಉತ್ಪಾದಕ ಕಂಪನಿಗಳು ಆರಂಭವಾಗಿದ್ದು, ಪ್ರತಿ ಕಂಪನಿಯಲ್ಲಿ ಒಂದು ಸಾವಿರ ಷೇರುದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಕನ್ನಡ ಪ್ರಾಧ್ಯಾಪಕರೂ, ಕಿರುತೆರೆ ನಟ ಡಾ. ಹನಿಯೂರು ಚಂದ್ರೇಗೌಡ, ಮೈಕ್ರೋಬಿ ಫೌಂಡೇಶನ್ ರವಿ ಯೋಗರಾಜ್, ಯುಎಸ್ ಕಮ್ಯುನಿಕೇಶನ್ ತ್ಯಾಗರಾಜ್, ಚರಣ್ ನಾಯ್ಡು, ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೈಕ್ರೋಬಿ ಫೌಂಡೇಶನ್ ಜಿಲ್ಲಾ ಸಂಚಾಲಕ ದಿದ್ದಿಗಿ ಮಹದೇವಪ್ಪ ಸ್ವಾಗತಿಸಿದರು. ಸಂಚಾಲಕ ಬಿ.ಸಿ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!