ಉಜ್ವಲ ಭವಿಷ್ಯದ ಬಜೆಟ್ : ಸಂಸದ ಸಿದ್ದೇಶ್ವರ
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಮೀಸಲಿಡುವ ಮೂಲಕ ನೀರಾವರಿ ಪ್ರದೇಶಗಳನ್ನು ವಿಸ್ತರಿಸುವ ಯೋಜನೆಗೆ ಈ ಬಜೆಟ್ ವೇಗ ನೀಡಿದೆ.
ಕೃಷಿ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ರೈಲ್ವೆ ಹೀಗೆ ಎಲ್ಲಾ ವಲಯಗಳಿಗೂ ಆದ್ಯತೆ ನೀಡಿ ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಗೆ ಪೂರಕವಾಗುವಂತಹ ಬಜೆಟ್ ಇದಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದ್ದಾರೆ.
ತಂತ್ರಜ್ಞಾನ-ಚಾಲಿತ ಮತ್ತು ಜ್ಞಾನ-ಆಧಾರಿತ ಆರ್ಥಿಕತೆಯ ಪ್ರಬಲ ಆಶಯಗಳನ್ನು ಈ ಬಜೆಟ್ ಹೊಂದಿದೆ. ಸಮಾಜದ ಎಲ್ಲಾ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ಮಂಡಿಸಿದ್ದಾರೆ. ಕಳೆದ 9 ವರ್ಷಗಳಲ್ಲಿ ಭಾರತದ ಆರ್ಥಿಕತೆ 10 ನೇ ಸ್ಥಾನದಿಂದ 5 ನೇ ಸ್ಥಾನಕ್ಕೇರಿದೆ, ಬಲಿಷ್ಟ ಆರ್ಥಿಕತೆ ಹೊಂದಲು ಈ ಬಜೆಟ್ ರೆಕ್ಕೆಗಳಾಗಿ ಕೆಲಸ ಮಾಡಲಿದೆ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ: ಕಾಂಗ್ರೆಸ್
ಕೇಂದ್ರ ಸರ್ಕಾರದ ಬಜೆಟ್ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎಂಬಂತಾಗಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಟೀಕಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಪರಿಣಾಮ ದಿಂದಾಗಿ ಕೆಲಸ ಕಳೆದುಕೊಂಡ ಯುವ ಜನತೆಗೆ 20 ಲಕ್ಷ ಕೋಟಿ ತೆಗೆದಿಡಲಾಗಿದೆ ಎಂಬ ಅಂಶವು ಬಜೆಟ್ ನಲ್ಲಿ ಇಲ್ಲದಿರುವುದು ನೋಡಿದರೆ ಯುವ ಜನರಿಗೆ ಏನನ್ನೂ ಸರ್ಕಾರ ಕೇಂದ್ರ ಸರ್ಕಾರ ನೀಡದೆ ಯುವ ಜನತೆಯನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ.
ಚಿನ್ನದ ದರವನ್ನು ಹೆಚ್ಚಿಸಿ ರುವ ಕೇಂದ್ರ ಸರ್ಕಾರದ ಕ್ರಮದಿಂದ ಬಡವರಿಗೂ ಅನಾನುಕೂಲವಾಗುವ ಸಾಧ್ಯತೆ ಇದ್ದು, ಇದಕ್ಕೆ ನಿರ್ಮಲ ಸೀತಾರಾಮನ್ ಅವರು ಪರಿಹಾರ ಕಂಡುಕೊಳ್ಳಬಹುದಿತ್ತು ಎಂದು ಸಲಹೆ ನೀಡಿದ್ದಾರೆ .
ಬಜೆಟ್ ನಿಂದ ಕೇವಲ ದೊಡ್ಡ ಉದ್ಯಮಿಗಳಿಗೆ ಮಾತ್ರ ಅನುಕೂಲ ವಾಗಲಿದ್ದು, ಸಣ್ಣಪುಟ್ಟ ಉದ್ಯಮಗಳಿಗೆ ಯಾವುದೇ ಅನುಕೂಲವಿಲ್ಲದೆ ಇರೋದ್ರಿಂದ ಉದ್ಯೋಗ ಸಮಸ್ಯೆ ಕಾಡಲಿದೆ ಎಂದು ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿ ರೂ. ಅನುದಾನ: ಶಾಸಕ ಎಸ್.ವಿ. ರಾಮಚಂದ್ರ ಹರ್ಷ
ಜಗಳೂರು, ಫೆ.1- ಬರಪೀಡಿತ ಜಗಳೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಇಂದು 5300 ಕೋಟಿ ರೂ. ಅನುದಾನ ನಿಗದಿಗೊಳಿಸಿರುವುದು ಸಂತಸ ಉಂಟು ಮಾಡಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಕೇಂದ್ರ ಸರ್ಕಾರಕ್ಕೆ ಅಭಿನಂದಿಸಿದ್ದಾರೆ.
ಬರದ ನಾಡಿನ ಬಹು ನಿರೀಕ್ಷಿತ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಚಾಲನೆ ಸಿಗಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೇಂದ್ರದ ಅನುದಾನವು ಬಿಡುಗಡೆ ಯಾಗಿರುವುದರಿಂದ ಕಾಮಗಾರಿ ತ್ವರಿತವಾಗಿ ಆರಂಭವಾಗಿ ಬರದ ನಾಡಿಗೆ ಭದ್ರೆ ನೀರು ಹರಿಯ ಲಿದೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.
ಜಗಳೂರು ಕ್ಷೇತ್ರಕ್ಕೆ 45 ಸಾವಿರ ಎಕರೆ ಪ್ರದೇಶಕ್ಕೆ ಅಪ್ಪರ್ ಭದ್ರಾ ಯೋಜನೆಯಡಿ ನೀರಾವರಿ ಕಲ್ಪಿಸಲು ಈಗಾಗಲೇ 1338 ಕೋಟಿ ರೂ.ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಬಜೆಟ್ ಸರ್ವ ಸ್ಪರ್ಶಿ, ಸರ್ವವ್ಯಾಪಿ : ಪ್ರಸನ್ನ
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಸರ್ವ ಸ್ಪರ್ಶಿ, ಸರ್ವವ್ಯಾಪಿಯಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್ ಹೇಳಿದ್ದಾರೆ.
ದೇಶದ 47 ಲಕ್ಷ ಯುವಕರಿಗೆ 3 ವರ್ಷ ಕಲಿಕಾ ತರಬೇತಿ (ಸ್ಟೈ ಫಂಡ್ )ನೀಡುವುದು. ಬೇಸಿಕ್ ಅಮೆನಿಟೀಸ್ ಮತ್ತು ಫೆಸಿಲಿಟಿಗಾಗಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಿಂದ ಯುವಕರಿಗೆ, ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸುವ ದೂರದೃಷ್ಟಿ ಬಜೆಟ್ ಇದಾಗಿದೆ. ದೇಶದ ಎಸ್ಸಿ, ಎಸ್ಟಿ ಹಾಗೂ ಒಬಿಸಿ ವರ್ಗದವರಿಗೆ ಈ ಬಜೆಟ್ ನಲ್ಲಿ ಹೆಚ್ಚಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂ.ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದರಿಂದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ಇದು ಬಹುದೊಡ್ಡ ವರದಾನವಾಗಲಿದೆ ಎಂದವರು ಹೇಳಿದ್ದಾರೆ.
ನಿರಾಶಾದಾಯಕ ಬಜೆಟ್ : ಬಾತಿ ಶಂಕರ್
ಕೇಂದ್ರ ಸರ್ಕಾರದ ಇಂದಿನ ಬಜೆಟ್ ನಿರಾಶಾದಾ ಯಕವಾಗಿದೆ ಎಂದು ಜೆಡಿಎಸ್ ಉತ್ತರ ಕ್ಷೇತ್ರದ ಅಧ್ಯಕ್ಷ ಬಾತಿ ಶಂಕರ್ ಹೇಳಿದ್ದಾರೆ.
ಇದು ಮುಂಬರುವ ಚುನಾವಣೆ ಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಬಜೆಟ್ ಆಗಿದೆ. ಎಂಟು ವರ್ಷಗಳಿಂದ ಇಲ್ಲದೇ ಇರುವ ನೀರಾವರಿ ಯೋಜನೆಗಳನ್ನು ಈಗ ನೀಡುತ್ತಿರುವುದನ್ನು ನೋಡಿದರೆ ಜನರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ. ಔದ್ಯೋಗಿಕ, ಕೈಗಾರಿಕೆ, ತೆರಿಗೆ ಗಳಲ್ಲಿ ನೀಡಿರುವ ಕೊಡುಗೆಗಳು ಮಧ್ಯಮ ವರ್ಗದ ಜನಗಳಿಗೆ ಅದ್ಭುತ ಕೊಡುಗೆಗಳಾಗಿ ಕಂಡರೂ ಇವುಗಳು ಜಾರಿಗೆ ಬರುವುದು ಅನುಮಾನ. ಒಟ್ಟಾಗಿ ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದವರು ಹೇಳಿದ್ದಾರೆ.
ಕೇಂದ್ರ ಬಜೆಟ್ ನಿರಾಶಾದಾಯಕ : ಡಿ. ಬಸವರಾಜ್
ಅಭಿವೃದ್ಧಿಗೆ ಪೂರಕವಲ್ಲದ ನಿರಾಶಾದಾಯಕ ಬಜೆಟ್ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಕೇಂದ್ರ ಬಜೆಟನ್ನು ಟೀಕಿಸಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಪೊಳ್ಳು ಘೊಷಣೆ ಮಾಡಿದ್ದಾರೆ. 15 ವರ್ಷಗಳ ಹಳೆಯ ಸರ್ಕಾರಿ ವಾಹನಗಳು ಗುಜರಿ ಪಾಲು ಆಗುವಂತೆ ಮಾಡಿ ಹೊಸ ವಾಹನ ತಯಾರಕರಿಂದ ದೊಡ್ಡ ಮೊತ್ತದ ರುಸುವತ್ತು ಪಡೆಯಲು ಹುನ್ನಾರ ಮಾಡಲಾಗಿದೆ.
ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು ಮೂಲ ಸೌಕರ್ಯಗೆ 10 ಲಕ್ಷ ಕೋಟಿ ಮೀಸಲು ಉಜ್ವಲ ಯೋಜನೆಯಲ್ಲಿ 6 ಕೋಟಿ ಜನರಿಗೆ ಹೊಸಸಂಪರ್ಕ ಘೋಷಣೆ ಮಾಡಿದ್ದಾರೆ. ಈ ಹಿಂದೆ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದವರು ಈಗಾಗಲೇ ಈ ಯೋಜನೆಯಿಂದ ಬೆಲೆ ಏರಿಕೆ ಕಾರಣ ಹೊರ ಬಂದಿದ್ದಾರೆ.
ಎಂದಿನಂತೆ ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ರೈತರು, ಬಡವರು, ಯುವಕರು, ಮಹಿಳೆಯರು, ದುರ್ಬಲರು, ದಲಿತರು, ವಿದ್ಯಾರ್ಥಿ ಯುವ ಜನರಿಗೆ ಯಾವುದೇ ಹೊಸ ಯೋಜನೆಗಳು ಇಲ್ಲ ಎಂದು ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.
ನಿರುದ್ಯೋಗ ನಿವಾರಣೆಗೆ ದಾರಿದೀಪ: ಮಂಜಪ್ಪ
ಕೇಂದ್ರದ ಇಂದಿನ ಬಜೆಟ್ ಯುವಕರಿಗೆ ಉದ್ಯೋಗ ಸೃಷ್ಠಿಸಿ, ನಿರುದ್ಯೋಗ ನಿವಾರಣೆಗೆ ದಾರಿದೀಪ ವಾಗಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ವೈ. ಮಂಜಪ್ಪ ಕಾಕನೂರು ಹೇಳಿದ್ದಾರೆ. ವೈಯಕ್ತಿಕ ವರಮಾನ ತೆರಿಗೆ ಏರಿಸಿರುವುದು. ಕರ್ನಾಟಕಕ್ಕೆ ರೈಲ್ವೇ ಹೊಸ ಮಾರ್ಗಗಳಿಗೆ ಹಾಗೂ ಭದ್ರಾ ಮೇಲ್ದಂಡ ಯೋಜನೆಗೆ ಹಣ ನೀಡಿರುವುತು ಸಂತಸದಾಯಕ ಎಂದವರು ಹೇಳಿದ್ದಾರೆ.
ಅಮೃತ ಕಾಲದ ಮೊದಲ ಬಜೆಟ್ ಸೂಪರ್: ಶಿವನಗೌಡ ಪಾಟೀಲ್
ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಅಮೃತ ಕಾಲದ ಅಭಿವೃದ್ಧಿ ಆಯವ್ಯಯ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಯುವ ಮುಖಂಡ ಶಿವನಗೌಡ ಪಾಟೀಲ್ ಬಣ್ಣಿಸಿದ್ದಾರೆ.
ಕರ್ನಾಟಕಕ್ಕೆ ಭರ್ಜರಿ ಕೊಡುಗೆ ನೀಡಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಘೋಷಿಸುವ ಮೂಲಕ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ.
ಇದೊಂದು ಜನಸ್ನೇಹಿ, ರೈತರ ಪರ, ಬಡವರ, ದೀನ-ದಲಿತರ, ಯುವಕರ, ಎಸ್ಸಿ ಎಸ್ಟಿ, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೂ ಆದ್ಯತೆ ನೀಡುವ ಎಲ್ಲರ ಮೆಚ್ಚುಗೆಗೆ ಬಜೆಟ್ ಪಾತ್ರವಾಗಿದೆ. ದೋಖೋ ಅಪ್ನಾ ದೇಶ್ ಯೋಜನೆಯಡಿ 50 ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಖುಷಿಯ ವಿಚಾರ ಎಂದಿದ್ದಾರೆ.
ತೆರಿಗೆ ಪದ್ಧತಿ ಮಾರ್ಪಾಡಿನಿಂದ ಗೊಂದಲ : ರಾಧೇಶ್ ಜಂಬಗಿ
ಬಜೆಟ್ನಿಂದಾಗಿ ಶ್ರೀ ಸಾಮಾನ್ಯನಿಗೆ ಆಶಾದಾಯಕವಾಗಿದ್ದು, ಆದಾಯ ತೆರಿಗೆಯಲ್ಲಿ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಮಾರ್ಪಾಡುಗಳನ್ನು ಮಾಡಿದ್ದು ಗೊಂದಲ ಉಂಟುಮಾಡಿದೆ, ಮಧ್ಯಮ ವರ್ಗದ ಮತ್ತು ಸಂಬಳದಾರರಿಗೆ ಅನುಕೂಲವಾಗಿರುತ್ತದೆ ಮತ್ತು ಕರ್ನಾಟಕ ರಾಜ್ಯದ ಭದ್ರಾ ಮೇಲ್ದಂಡೆ ಯೊಜನೆಗೆ ರೂ. 5,300 ಕೋಟಿ ಇರುವುದು ರೈತರಿಗೆ ಅನುಕೂಲವಾಗಿದೆ. ರಕ್ಷಣಾ ಇಲಾಖೆಗೆ, ಬಿಡಿ ಭಾಗಗಳು, ಟಿ.ವಿ, ಕ್ಯಾಮರಾ ಲೆನ್ಸ್ ಮತ್ತು ಮೊಬೈಲ್ ಬಿಡಿ ಭಾಗಗಳನ್ನು ದೇಶದಲ್ಲಿ ಉತ್ಪಾದನೆಗೆ ಕೊಟ್ಟಿರುವುದು ಮೇಕ್-ಇನ್-ಇಂಡಿಯಾದ ಶುಭ ಸೂಚನೆ ಮತ್ತು ನಿರುದ್ಯೋಗಿಗಳಿಗೆ ಆಶಾದಾಯಕ. ಮತ್ತು ಬ್ಯಾಂಕಿಂಗ್ ಡಿಜಿಟಲೈಸೇಶನ್ 76% ಏರಿಕೆಯಾಗಿದೆ.
ಜಿ.ಎಸ್.ಟಿ ಯಲ್ಲಿ 2017-18, 2018-19 ರ ಸಾಲಿಗೆ ಕ್ಷಮಾದಾನ ಯೋಜನೆ ಪ್ರಕಟಿಸದಿರುವುದು ನಿಜಕ್ಕೂ ಶೋಚನೀಯ ಎಂದು ದಾವಣಗೆರೆ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ತಿಳಿಸಿದ್ದಾರೆ.
ಮಧ್ಯಮ ವರ್ಗದ ಪರ ಬಜೆಟ್
ರೈಲ್ವೆಗೆ 2.40 ಲಕ್ಷ ಕೋಟಿ ಬಂಡವಾ ಳವನ್ನು ಒದಗಿಸಲಾಗಿದೆ. ಇದು 2013-2014 ರ ನಂತರ ಮಾಡಲಾದ ಅತಿ ಹೆಚ್ಚು. ಇದೊಂದು ತುಂಬಾ ಒಳ್ಳೆಯ ಬೆಳವಣಿಗೆ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಅನುದಾನ ಘೋಷಿಸಿರುವುದು ಸಂತಸ ತಂದಿದೆ ಹೊಸ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿ ಮಿತಿಯನ್ನು ರೂ 7 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪ, ಮಾಧ್ಯಮ ವರ್ಗದವರ ಅಭಿವೃದ್ಧಿಗೆ ಒಳ್ಳೆಯ ಬಜೆಟ್ ಎಂದು ಹೇಳಬಹುದು. ಸುಮಾರು ವರ್ಷಗಳ ನಂತರ ಮಧ್ಯಮ ವರ್ಗದವರ ಪರವಾಗಿ ಬಜೆಟ್ ಘೋಷಣೆಯಾಗಿದೆ ಎಂದು ದಾವಣಗೆರೆ ನೈರುತ್ಯ ರೈಲ್ವೆ ವಲಯ ಪ್ರಯಾ ಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ತಿಳಿಸಿದ್ದಾರೆ.
ನವ ಕೃಷಿ ಉದ್ದಿಮೆಗಳಿಗೆ ಅನುದಾನ : ಸ್ವಾಗತಾರ್ಹ
ಕೃಷಿ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯ ಅನುದಾನ ಒದಗಿಸಿರುವುದ ರಿಂದ ಬರದ ನಾಡಿನಲ್ಲಿ ಹನಿ ನೀರಾವರಿ ಯೋಜನೆಯಿಂದ ಸಮಗ್ರ ಸುಸ್ಥಿರ ಕೃಷಿಗೆ ಸಹಾಯವಾಗಲಿದೆ. ಸಿರಿ ಧಾನ್ಯಗಳ ಸಂಸ್ಕರಣೆ, ನೈಸರ್ಗಿಕ ಕೃಷಿಗೆ ಉತ್ತೇಜನ ಹಾಗೂ ಜೈವಿಕ ಒಳಸುರಿಗಳ ಸಂಪನ್ಮೂಲ ಕೇಂದ್ರಗಳ ಸ್ಥಾಪನೆ ಯೋಜನೆಗಳು ರೈತರಿಗೆ ವರದಾನವಾಗಲಿವೆ. ಯುವಕರನ್ನ ಕೃಷಿಯಡೆಗೆ ಆಕರ್ಷಿಸಲು ನವ ಕೃಷಿ ಉದ್ದಿಮೆಗಳಿಗೆ ಅನುದಾನ ಒದಗಿಸಿರುವುದು ಉತ್ತಮ ಬೆಳವಣಿಗೆ ಎಂದು ತೋಟಗಾರಿಕಾ ವಿಜ್ಞಾನಿ ಎಂ.ಜಿ. ಬಸವನಗೌಡ ಕೇಂದ್ರ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವುದೇ ಹೊಸತನ ಕಾಣಿಸುತ್ತಿಲ್ಲ
ಕೇಂದ್ರ ಬಜೆಟ್ನಲ್ಲಿ ಯಾವುದೇ ಹೊಸತನ ಕಾಣಿಸುತ್ತಿಲ್ಲ. ಆದಾಯ ತೆರಿಗೆ ವಿನಾಯಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೇರಿಸಿರುವುದು ಮಧ್ಯಮ ವರ್ಗದವರಿಗೆ ತುಸು ಸಮಾಧಾನಕರ. ಉಳಿದಂತೆ ಜನರಿಗೆ ಆದಾಯ ತರುವ ಮಾರ್ಗಗಳು, ರೈತಾಪಿ ವರ್ಗದವರಿಗೆ ಅನುಕೂಲಕರ ಪ್ರಸ್ತಾಪಗಳು ಬಜೆಟ್ನಲ್ಲಿ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅಲ್ಪ ಪ್ರಮಾಣದ ನೆರವು ಘೋಷಿಸಲಾಗಿದೆ ಎನ್ನುವುದು ಬಿಟ್ಟರೆ, ಕರ್ನಾಟಕಕ್ಕೆ ಅಂತಹ ಅನುಕೂಲಗಳು ಆಗಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವ ಬಗ್ಗೆ ಆಲೋಚನೆಯನ್ನೇ ಮಾಡಲಾಗಿಲ್ಲ. ಬಜೆಟ್ ಘೋಷವಾಕ್ಯಗಳಿಗೆ ಸೀಮಿತವಾದಂತಿದೆ ಎಂದು ಹಿರಿಯ ವಕೀಲ ಎಲ್.ಹೆಚ್. ಅರುಣ್ ಕುಮಾರ್ ಹೇಳಿದ್ದಾರೆ.
ರೈತಸ್ನೇಹಿ ಬಜೆಟ್: ಸತೀಶ್
ಕೇಂದ್ರ ಬಜೆಟ್ನಲ್ಲಿ ಬರಪೀಡಿತ ಸುಮಾರು 2.25 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಸರಬರಾಜು ಮಾಡುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, 5300 ಕೋಟಿ ರೂ. ಅನುದಾನ ನೀಡಲಾಗಿದೆ. ಜೈವಿಕ ಗೊಬ್ಬರ ತಯಾರಿಕೆಗೆ “ಗೋವರ್ಧನ್” ಯೋಜನೆ, ಸಾವಯವ ಕೃಷಿಗೆ ಮತ್ತು ಸಿರಿಧಾನ್ಯ ಬೆಳೆಯಲು ವಿಶೇಷ ಒತ್ತು ನೀಡಲಾಗಿದ್ದು, 150 ಮೆಡಿಕಲ್ ಕಾಲೇಜು ಸ್ಥಾಪನೆ, 157 ನರ್ಸರಿ ಕಾಲೇಜು ಸ್ಥಾಪನೆ, 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ರೈತ ಸ್ನೇಹಿ, ಜನಪರ ಬಜೆಟ್ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಸಂಚಾಲಕ ಬಿ.ಎಂ. ಸತೀಶ್ ಕೊಳೇನಹಳ್ಳಿ ಹೇಳಿದ್ದಾರೆ.
ಹೊರೆ ಇಳಿಸಿದ ಆಯವ್ಯಯ
ನೀರಾವರಿ, ಶಿಕ್ಷಣ ಮತ್ತು ಮಹಿಳಾ ಸಬ ಲೀಕರಣಗಳಿಗೆ ಒತ್ತು ನೀಡಿದ ಬಜೆಟ್ ನೌಕರ ವರ್ಗದವರಿಗೆ ತೆರಿಗೆ ಹೊರೆ ಇಳಿಸಿದ್ದರಿಂದ ನೌಕರ ವರ್ಗದವರಲ್ಲಿ ಸಂತಸ ತಂದಿದೆ ಎಂದು ಪ್ರಾಧ್ಯಾಪಕ ಪ್ರೊ. ಭೀಮಣ್ಣ ಸುಣಗಾರ ಅವರು ಬಣ್ಣಿಸಿದ್ದಾರೆ. ಕರ್ನಾಟಕಕ್ಕೆ ಭದ್ರಾ ಆಧುನಿಕ ರಣಕ್ಕೆ ಹಣದ ನೆರವು ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಆಹಾರ ಭದ್ರತಾ ಕಾಯ್ದೆ ದುರ್ಬಲ: ಶಶಿಧರ್
ಹರಪನಹಳ್ಳಿ, ಫೆ.1- ಕೇಂದ್ರ ಸರ್ಕಾರದ್ದು ನಿರಾಶಾ ದಾಯಕ ಬಜೆಟ್ ಎಂದು ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ್ ಟೀಕಿಸಿದ್ದಾರೆ.
ನಿರ್ಮಲಾ ಸೀತಾರಾಮನ್ 39.45 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಗಿಂತ 4.61 ಲಕ್ಷ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ಉದ್ಯೋಗ ಸೃಷ್ಟಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ದುರ್ಬಲಗೊಳಿಸಿದ್ದಾರೆ.
ಜನರಿಗೆ ನೀಡುತ್ತಿದ್ದ ಉಚಿತ ಅಕ್ಕಿ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಎನ್ಇಪಿ ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ. ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚುವರಿಯಾಗಿ ಅನುದಾನ ನೀಡಿಲ್ಲ ಎಂದು ಹೇಳಿದ್ದಾರೆ.
ಸುಮಾರು 35 ಕೋಟಿ ರೂ. ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಇದರಿಂದ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಚುನಾವಣೆ ನಡೆಯುವ ರಾಜ್ಯಗಳಿಗೆ ಯಾವುದೇ ಯೋಜನೆ ಇಲ್ಲ. ಕರ್ನಾಟಕಕ್ಕೂ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ ಎಂದವರು ಹೇಳಿದ್ದಾರೆ.
ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕ
ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಹಾಲೇಶಪ್ಪ ಹೇಳಿದ್ದಾರೆ.
ವಿಶೇಷವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಮೀಸಲು ಇಟ್ಟಿರುವುದು ಕರ್ನಾಟಕದ ಒಣಭೂಮಿ ಪ್ರದೇಶದ ಕೃಷಿ ಭೂಮಿಗಳ ಅಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿಗೆ ಮತ್ತಷ್ಟು ಅನುಕೂಲ ಆಗುತ್ತದೆ ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಜಾಗತಿಕ ಮಟ್ಟದಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಿ ರಾಗಿ, ಅಕ್ಕಿ, ಜೋಳ, ನವಣೆಗಳ ಮೂಲಕ ದೇಶದ ಒಂದು ಕೋಟಿ ರೈತರಿಗೆ ಸಿರಿ ಧಾನ್ಯ ಬೆಳೆಯಲು ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹ. ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.