ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕಾರ

ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕಾರ - Janathavaniಚಿತ್ರದುರ್ಗ, ಜ.31-  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಹಾಗೂ ಪರಿಶಿಷ್ಟ ಜಾತಿ – ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ  ಶ್ರೀ ಶಿವ ಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಸಲ್ಲಿಸಿದ್ದ ಪ್ರತ್ಯೇಕ ಎರಡು ಅರ್ಜಿಗಳ ಪೈಕಿ ಒಂದನ್ನು ಜಿಲ್ಲಾ ನ್ಯಾಯಾಲಯ ಇಂದು ತಿರಸ್ಕರಿಸಿದೆ. 

ಸಂತ್ರಸ್ತ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರ ಪೈಕಿ ಒಬ್ಬರು ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಯಲ್ಲಿದ್ದು, ಈ ದೋಷಾರೋಪ ಪಟ್ಟಿಯ ಮೇಲಿನ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. 

ಮತ್ತೊಂದು ದೋಷಾರೋಪ ಪಟ್ಟಿಯ ಮೇಲಿನ ಅರ್ಜಿಯ ಆದೇಶವನ್ನು ನ್ಯಾಯಾಧೀಶರಾದ ಕೋಮಲಾ ಅವರು ಫೆಬ್ರವರಿ 6ಕ್ಕೆ ಕಾಯ್ದಿರಿಸಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಕೆಗೂ ಮುನ್ನ ಜಾಮೀನು ಅರ್ಜಿಯನ್ನು ಇದೇ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ ನಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ ದೋಷಾರೋಪಪಟ್ಟಿ ಸಲ್ಲಿಕೆಯಾಗಿತ್ತು. ಹೈಕೋರ್ಟ್‌ನಲ್ಲಿದ್ದ ಅರ್ಜಿಯನ್ನು ಹಿಂಪಡೆದ ಶರಣರ ಪರ ವಕೀಲರು, ಮತ್ತೆ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. 

ದೋಷಾರೋಪ ನಿಗದಿಗೂ ಮುನ್ನ ನಡೆದ ವಿಚಾರಣೆಯ ಆದೇಶ, ದೋಷಾರೋಪ ಪಟ್ಟಿಯಿಂದ ತಮ್ಮನ್ನು ಕೈಬಿಡುವಂತೆ ಹಾಸ್ಟೆಲ್ ವಾರ್ಡನ್ ಹಾಗೂ ಮಠದ ಮಾಜಿ ವ್ಯವಸ್ಥಾಪಕ ಪರಮಶಿವಯ್ಯ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನ್ಯಾಯಾಲಯ ಫೆಬ್ರವರಿ 8ಕ್ಕೆ ಕಾಯ್ದಿರಿಸಿತು.

error: Content is protected !!