ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಥಯಾತ್ರೆಗೆ ಜಿಗಳಿಯಲ್ಲಿ ಸ್ವಾಗತ

ಮಲೇಬೆನ್ನೂರು, ಜ.27- ಹಾವೇರಿ ಜಿಲ್ಲೆಯ ಅತ್ತಿಕಟ್ಟೆ ಗ್ರಾಮದಲ್ಲಿ ಫೆಬ್ರವರಿ 9 ಮತ್ತು 10 ರಂದು ಹಾಸನ ಜಿಲ್ಲೆಯ ಪುಷ್ಪಗಿರಿ ಮಠದ ಶ್ರೀ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸ್ವ-ಸಹಾಯ ಸಂಘಗಳ ಮಹಿಳಾ ಸಮಾವೇಶ ಹಾಗೂ ಕೃಷಿ ಮೇಳದ ಅಂಗವಾಗಿ ಸಂಚರಿಸುತ್ತಿರುವ ರಥಯಾತ್ರೆಗೆ ಶುಕ್ರವಾರ ಜಿಗಳಿಯಲ್ಲಿ ಪೂಜೆ ಸಲ್ಲಿಸಿ, ದಾವಣಗೆರೆ ಜಿಲ್ಲೆಯ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಗ್ರಾಮದ ಎನ್.ರುದ್ರೇಗೌಡರ ವೃತ್ತದಲ್ಲಿ ಯಲವಟ್ಟಿಯ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಅವರು ರಥಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಈಗಾಗಲೇ ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಸಂಘಟಿಸಿರುವ ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣೀಭೂತರಾಗಿದ್ದಾರೆ.

ಅದೇ ರೀತಿಯಲ್ಲಿ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಯಲ್ಲೂ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು,
ಈ ಹಿನ್ನೆಲೆಯಲ್ಲಿ ಅತ್ತಿಕಟ್ಟೆ ಮಠದಲ್ಲಿ ಫೆ.9 ಮತ್ತು 10 ಮಹಿಳಾ ಸಮಾವೇಶ ಹಾಗೂ ರೈತರ ಅನುಕೂಲಕ್ಕಾಗಿ ಕೃಷಿ ಮೇಳವನ್ನು ಏರ್ಪಡಿಸಿದ್ದಾರೆ. ಇದೇ
ವೇಳೆ ಭಕ್ತರು ಪುಷ್ಪಗಿರಿ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮವನ್ನೂ ಸಂಘಟಿಸಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಇನ್ನೂ ಅನೇಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀ ಯೋಗಾನಂದ ಸ್ವಾಮೀಜಿ ತಿಳಿಸಿದರು.

ಮಾಜಿ ಶಾಸಕ ಬಿ.ಪಿ.ಹರೀಶ್ ಅವರೂ ರಥ ಯಾತ್ರೆಗೆ ಶುಭ ಕೋರಿದರು. ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಎನ್.ಆರ್.ಇಂದೂಧರ್, ಗ್ರಾಮದ ಮುಖಂಡರಾದ ಗೌಡ್ರ ಬಸವರಾಜಪ್ಪ, ಜಿ.ಎಂ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಂ.ವಿ.ನಾಗರಾಜ್, ಜಿ.ಬೇವಿನಹಳ್ಳಿಯ ಬಿ.ಕೆ.ಮಹೇಶ್ವರಪ್ಪ, ಜಿ.ಎಂ.ಬಸವನಗೌಡ, ಸಿ.ಎನ್.ಪರಮೇಶ್ವರಪ್ಪ, ಎಕ್ಕೆಗೊಂದಿ ರುದ್ರಗೌಡ, ಜಿ.ಪಿ.ಹನುಮಗೌಡ, ಮುದೇ ನೂರು ಗದಿಗೆಪ್ಪ, ಎನ್.ಎಂ.ಭರಮಗೌಡ, ಎಂ.ಕೆ.ಸ್ವಾಮಿ, ಆಟೋ ಶಿವು, ಮಂಜಣ್ಣ, ಕೆ.ಸಿ.ಬಸವರಾಜ್, ಜಿ.ಪಿ.ಮಂಜು, ಟಿ.ಎಸ್.ಗದಿಗೆಪ್ಪ ಸೇರಿದಂತೆ ಸ್ವ-ಸಹಾಯ ಸಂಘಗಳ ಮಹಿಳೆಯರು, ಗ್ರಾಮಸ್ಥರು ಈ ವೇಳೆ ಹಾಜರಿದ್ದು, ರಥವನ್ನು ಬೀಳ್ಕೊಟ್ಟರು.

ಈ ರಥವು ಹರಿಹರ, ಹೊನ್ನಾಳಿ, ದಾವಣಗೆರೆ ತಾಲ್ಲೂಕುಗಳಲ್ಲಿ ಸಂಚರಿಸಲಿದೆ.

error: Content is protected !!