40% ಕಮಿಷನ್: ಪ್ರಮಾಣಕ್ಕೆ ಸಿದ್ಧ

40% ಕಮಿಷನ್: ಪ್ರಮಾಣಕ್ಕೆ ಸಿದ್ಧ - Janathavaniಕಾಂಗ್ರೆಸ್‌ನವರೂ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ: ಭೈರತಿ

ದಾವಣಗೆರೆ, ಜ.25- ಶೇ.40 ಕಮೀಷನ್ ವಿಚಾರದಲ್ಲಿ ನಾನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿ ಯಲ್ಲಿ ದೇವರನ್ನು ಮುಟ್ಟಿ ಪ್ರಮಾಣ ಮಾಡಲು ಸಿದ್ಧನಿದ್ಧೇನೆ. ಕಾಂಗ್ರೆಸ್ ನವರು ಕೂಡ ಬಂದು ಪ್ರಮಾಣ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸವಾಲು ಹಾಕಿದರು.

ಶೇ.40 ಪರ್ಸೆಂಟ್ ಕಮೀಷನ್ ವಿಚಾರವಾಗಿ ಕಾಂಗ್ರೆಸ್‌ನವರು ಅಧಿ ಕಾರದ ಲಾಲಸೆಯಿಂದಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾ ಗುವ ಜಾಯಮಾನ ನನ್ನದಲ್ಲ. ಅದು ಆ ಪಕ್ಷದವರಿಗೂ ಗೊತ್ತಿದ್ದರೂ ಮಾತನಾ ಡುವುದು ಸಮಂಜಸವಲ್ಲ. 40% ಕಮೀಷನ್ನು ನಾನು ಪಡೆದಿರುವುದು ನಿಜವೆಂಬುದು ಸಾಬೀತುಪಡಿಸಿದರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ. ಕಾಂಗ್ರೆಸ್ ನವರು ಸಹ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ರಾಜ್ಯದ ಜನ ಎಲ್ಲವನ್ನೂ ಉಚಿತವಾಗಿ ಕೊಡಿ ಎನ್ನುತ್ತಾರೆ. ‌ಅವರು ಕೇಳಿದಂತೆ ಎಲ್ಲವನ್ನು ಉಚಿತವಾಗಿ ನೀಡಿದರೆ ಸರ್ಕಾರ ನಡೆಸುವುದು ಹೇಗೆ? ಇವರೆಲ್ಲ ಸರ್ಕಾರ ನಡೆಸುತ್ತಾರಾ ಎಂದು ಸಚಿವ ಭೈರತಿ ಕಾಂಗ್ರೆಸ್ ಪಕ್ಷದ ಉಚಿತ ವಿದ್ಯುತ್ ಭರವಸೆಗೆ
ಆಕ್ಷೇಪ ವ್ಯಕ್ತಪಡಿಸಿದರು. ಸಚಿವ ಸುಧಾಕರ್ ಬಗ್ಗೆ ಯೂ ಕಾಂಗ್ರೆಸ್‌ನವರು ಹಗುರವಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳ ಬಗ್ಗೆ ತಾಕತ್ತು ಧಮ್ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೆ ತಾಕತ್ತು ಇರುವುದರಿಂದಲೇ ನಾವು ಕೆಲಸ ಮಾಡುತ್ತಿರುವುದು.‌ ಹೀಗೆ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಬೇಡ.‌ ನಾಡಿನ ಜನ ಏನು ತೀರ್ಮಾನ ಕೈ ಗೊಳ್ಳುತ್ತಾರೋ ಅದಕ್ಕೆ ನಾವೆಲ್ಲರೂ ತಲೆ ಬಾಗಬೇಕು ಎಂದರು.

ಸಿದ್ದರಾಮಯ್ಯ ಯಾವ ಕ್ಷೇತ್ರದಿಂದಲಾದರೂ ಸ್ಪರ್ಧೆ ಮಾಡಲಿ. ಆದರೆ ಮಾಜಿ ಮುಖ್ಯಮಂತ್ರಿಗಳಾಗಿರುವ ಅವರು ವಾಸ್ತವಿಕತೆಗೆ ಹತ್ತಿರವಾಗಿ ಮಾತನಾಡ ಬೇಕೆಂದು ಸಲಹೆ ನೀಡಿದರು.

ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೈಸೂರು- ಬೆಂಗಳೂರು, ಚಿಕ್ಕಬಳ್ಳಾಪುರ – ಡಾಬಸ್‌ ಪೇಟೆ ಹೀಗೆ ಅನೇಕ ರಾಷ್ಟ್ರೀಯ ಹೆದ್ದಾರಿಗಳ ಯೋಜನೆ ಕಾರ್ಯಗತ ಗೊಂಡಿವೆ.‌ ದಾವಣಗೆರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಮತ್ತು ಕೈಗಾರಿಕಾ ಕಾರಿಡಾರ್ ನಿರ್ಮಾಣ ಸಂಬಂಧದಲ್ಲಿ ರೈತರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದರು.

error: Content is protected !!