ಕಕ್ಕರಗೊಳ್ಳದಲ್ಲಿ ಟಗರು ಕಾಳಗಕ್ಕೆ ಪರ, ವಿರೋಧದ ಜಟಾಪಟಿ

ದಾವಣಗೆರೆ, ಜ.23- ಟಗರು ಕಾಳಗ ನಡೆಸುವ ವಿಚಾರದಲ್ಲಿ ಪರ ಮತ್ತು ವಿರೋಧದಿಂದ ಗ್ರಾಮದ ಹಿರಿಯರು ಮತ್ತು ಯುವಕರ ಮಧ್ಯೆ ಬಿರುಕು ಉಂಟಾದ ಘಟನೆ ಕಕ್ಕರಗೊಳ್ಳ ಗ್ರಾಮದಲ್ಲಿ ನಡೆದಿದೆ.

ಮಕರ ಸಂಕ್ರಾಂತಿ ನಂತರ ಮನರಂಜನೆಗೆಂದು  ಟಗರು ಕಾಳಗ ಆಯೋಜಿಸಲು ಕೆಲ ಯುವಕರು ಮತ್ತು ಹಿರಿಯರು ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಟಗರು ಕಾಳಗ ನಡೆಸದಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಕ್ರೀಡೆಯಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗುತ್ತದೆ. ಅಲ್ಲದೇ ಕೋಮು ಸೌಹಾರ್ದತೆ ಹಾಳಾಗುತ್ತದೆ. ಒಗ್ಗಟ್ಟಾಗಿದ್ದ ನಮ್ಮ ನಮ್ಮಲ್ಲಿ ಬಿರುಕು ಉಂಟಾಗುತ್ತದೆ. ಜೂಜು ಆಡಿಸಲೆಂದೇ ಕ್ರೀಡೆ ಆಯೋಜನೆ ಮಾಡಲಾಗಿದೆ. ಇಲ್ಲಿ ಜೂಜು ನಡೆಯುವ ಸಾಧ್ಯತೆ ಇದ್ದು, ಗ್ರಾಮದ ಯುವಕರಿಗೆ ಇದು ಮಾರಕವಾಗಲಿದೆ ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಇದಲ್ಲದೇ ಇಂದು ಇಲ್ಲಿ ಜೂಜು ಆಡಿದವರು ನಾಳೆ ಬೇರೆ ಕಡೆ ಹೋಗಿ ಆಡುತ್ತಾರೆ. ಇದರಿಂದ ನಮಗೆ ಮತ್ತು ನಮ್ಮ ಗ್ರಾಮಕ್ಕೆ ತೊಂದರೆಯಾಗಲಿದೆ. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರೂ ಟಗರು ಕಾಳಗ ಕ್ರೀಡೆ ಆಯೋಜನೆ ಮಾಡಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಗ್ರಾಮಸ್ಥರು ಈ ಕುರಿತು ಚರ್ಚೆಗೆ ಆಯೋಜಕರನ್ನು ಕರೆದರೆ, ಅವರು ನಮ್ಮ ಆಹ್ವಾನ ಧಿಕ್ಕರಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಟಗರು ಕಾಳಗ ನಡೆಯಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕೆಲ ಪೊಲೀಸ್ ಅಧಿಕಾರಿಗಳು ಸಹ ಆಯೋಜಕರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಪೊಲೀಸರು ಈ ಟಗರು ಕಾಳಗ ನಿಲ್ಲಿಸಲೇಬೇಕು. ಆಯೋಜಕರು ಮತ್ತು ಪೊಲೀಸ್ ಅಧಿಕಾರಿಗಳ ನಡತೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನೊಂದೆಡೆ ಅದೇನೇ ಆದರೂ ನಾವು ಈ ಟಗರು ಕಾಳಗ ಸ್ಪರ್ಧೆ ನಡೆಸುತ್ತೇವೆ ಎಂದು ಆಯೋಜಕರು ಪಟ್ಟು ಹಿಡಿದಿದ್ದು, ಅವರೂ ಕೂಡ ಟಗರು ಕಾಳಗಕ್ಕೆ ಸೂಕ್ತ ಬಂದೋಬಸ್ತ್ ನೀಡುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಕ್ರೀಡಾ ಆಯೋಜನೆ ಕುರಿತು ಪ್ರಚಾರ, ಜಾಹಿರಾತು ಮಾಡಿದ್ದೇವೆ. ಈಗ ಏಕಾಏಕಿ ರದ್ದುಪಡಿಸಲು ಸಾಧ್ಯವಿಲ್ಲ. ಇದು ಕೇವಲ ಮನರಂಜನೆಯ ಉದ್ದೇಶದಿಂದ ಮಾತ್ರ ನಡೆಸಲಾಗುತ್ತಿದೆ. ಇಲ್ಲಿ ಯಾವುದೇ ಜೂಜು ಆಗಲಿ ಇತರೆ ಅವ್ಯವಹಾರ ಆಗಲೀ ನಡೆಯುತ್ತಿಲ್ಲ. ನಮಗೆ ಆಗದ ಕೆಲವರು ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಲ್ಲರೂ ಸೇರಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಆದರೆ, ಗ್ರಾಮದ ಕೆಲ ಯುವಕರು, ಹಿರಿಯರು ನಮ್ಮ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಗಮನಕ್ಕೆ ತಂದು, ಅವರ ಸಮ್ಮುಖದಲ್ಲಿ ಕ್ರೀಡೆ ನಡೆಸುತ್ತಿದ್ದೇವೆ ಎಂದು ಟಗರು ಕಾಳಗ ಆಯೋಜಕರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಇದು ಟಗರಿನ ಕಾಳಗ ಎನ್ನ ಲಾಗಿದ್ದರೂ ಇದರ ಹಿಂದೆ ರಾಜಕೀಯ ಲೆಕ್ಕಾ ಚಾರದ ಶಂಕೆ ವ್ಯಕ್ತವಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾಳಗ ಅನ್ನೋ ಮಾತು ಸಹ ಕೇಳಿ ಬರುತ್ತಿದೆ. ಚುನಾವಣೆ ಸಮೀಪಿಸು ತ್ತಿರುವ ಈ ಸಂದರ್ಭದಲ್ಲಿ ಈ ವಾತಾವರಣ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

error: Content is protected !!