6ನೇ ದಿನಕ್ಕೆ ಆರೋಗ್ಯ ಇಲಾಖೆ ಗುತ್ತಿಗೆ – ಹೊರಗುತ್ತಿಗೆ ನೌಕರರ ಮುಷ್ಕರ
ದಾವಣಗೆರೆ, ಸೆ.28- ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ತಮ್ಮ ಕರ್ತವ್ಯದಿಂದ ದೂರ ಉಳಿದು ತಮ್ಮ ಮನೆಗಳಲ್ಲಿಯೇ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಅಸಹಕಾರ ಚಳುವಳಿ ನಡೆಸಲಾಗುತ್ತಿದೆ.
ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ಬಡ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಎನ್.ಸಿ. ಹಾಲಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಇದೇ 24ರಿಂದ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟ ಹಿನ್ನೆಲೆಯಲ್ಲಿ ಎಲ್ಲಾ ನೌಕರರು ಮನೆಯಲ್ಲಿಯೇ ಶಾಂತಿಯುತವಾಗಿ ಮುಷ್ಕರವನ್ನು ಮುಂದುವರೆಸುತ್ತಿದ್ದಾರೆ. ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಸರ್ಕಾರವು ಈಗ ಮೌನ ವಹಿಸಿ, ಅಧಿಕಾರಿಗಳ ಮೂಲಕ ಮುಷ್ಕರ ನಿರತ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವಿರುದ್ದ ಶಿಸ್ತು ಕ್ರಮಕ್ಕೆ ನಿರ್ದೇಶಿಸಿರುವುದು ಖಂಡನೀಯ ಎಂದು ಆಕ್ಷೇಪಿಸಿದ್ದಾರೆ.
ಕೋವಿಡ್ ವಿರುದ್ದ ಕೆಲಸ ಮಾಡಿಸಿಕೊಳ್ಳುವಾಗ ಕೊರೊನಾ ವಾರಿಯರ್ಸ್ ಎಂದು ಹೇಳಿ ಚಪ್ಪಾಳೆ ತಟ್ಟಿ ಕೈ ಬಿಟ್ಟರೆ ಬಡ ನೌಕರರ ಜೀವನದ ಪಾಡು ಏನೆಂಬುದು ಅರಿಯದಂತೆ ಸರ್ಕಾರ ವರ್ತಿಸುತ್ತಿದೆ. ಕೊರೊನಾದಿಂದ ಜಾರಿಗೆ ತಂದಿದ್ದ ಲಾಕ್ಡೌನ್ನಿಂದಾಗಿ ಅಲ್ಪ ವೇತನದಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಹೆಸರಿಗಷ್ಟೇ ಕೊರೊನಾ ವಾರಿಯರ್ಸ್, ಇದೇನಾ ವಾರಿಯರ್ಸ್ಗೆ ನೀಡುತ್ತಿರುವ ಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮುಷ್ಕರದಲ್ಲಿ ಸಂಘದ ಉಪಾಧ್ಯಕ್ಷ ಡಾ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಾ. ಅಂದಾನಗೌಡ ಪಾಟೀಲ್, ಖಜಾಂಚಿ ಅಂಬರೀಷ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಹಾಗೂ ಸದಸ್ಯರು ಭಾಗವಹಿಸಿದ್ದಾರೆ.