ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ನೀತಿ ಬಗ್ಗೆ ಮರುಚಿಂತನೆ ಬೇಕಿದೆ : ನ್ಯಾ. ನಾಗಮೋಹನ್ದಾಸ್
ದಾವಣಗೆರೆ, ಸೆ. 26 – ಕೇಂದ್ರ ಸರ್ಕಾರ ರೂಪಿಸಿರುವ ನೂತನ ಶಿಕ್ಷಣ ನೀತಿಯಿಂದ ಅಸಮಾನತೆ, ಖಾಸಗೀಕರಣ, ವರ್ಗಭೇದ ಹೆಚ್ಚಾಗಲಿದೆಯೇ ಹೊರತು, ಕಡಿಮೆಯಾಗುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಈ ನೀತಿಯ ಬಗ್ಗೆ ಮರು ಚಿಂತನೆಯ ಅಗತ್ಯವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆಯ ವತಿಯಿಂದ ಆನ್ಲೈನ್ ಮೂಲಕ ಇಂದು ಆಯೋಜಿಸಲಾಗಿದ್ದ `ಹೊಸ ರಾಷ್ಟ್ರೀಯ ಶಿಕ್ಷಣ ನೀತಿ : ಒಳನೋಟ’ ವಿಷಯ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಶಿಕ್ಷಣ ನೀತಿಯಿಂದ ಖಾಸಗಿ ಸಂಸ್ಥೆಗಳು ಬೆಳೆಯಲು ಅವಕಾಶವಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಪೆಟ್ಟು ಬೀಳಲಿದೆ. ಖಾಸಗಿಯವರಿಗೆ ಶಿಕ್ಷಣ ಒಪ್ಪಿಸುವುದು ಸಂವಿಧಾನ ಬಾಹಿರ ಎಂದವರು ಹೇಳಿದರು.
ಶಿಕ್ಷಣವು ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿದೆ. ಆದರೆ, ರಾಜ್ಯಗಳ ಜೊತೆ ಚರ್ಚೆ ನಡೆಸದೇ, ಅವುಗಳ ಅಧಿಕಾರ ಮೊಟಕುಗೊಳಿಸಿ ನೂತನ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದರು.
ನೂತನ ಶಿಕ್ಷಣ ನೀತಿಯ ಬಗ್ಗೆ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿಲ್ಲ. ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸದೇ, ಸಂಸತ್ತಿನಲ್ಲಿ ಚರ್ಚೆ ನಡೆಸದೇ ಜಾರಿಗೆ ತರಲಾಗಿದೆ. ಇದು ಸಂವಿಧಾನದ ಆಶಯ ಹಾಗೂ ಸಾಮಾಜಿಕ ನ್ಯಾಯ ಧಿಕ್ಕರಿಸಿದಂತೆ ಎಂದವರು ತಿಳಿಸಿದರು.
ನೂತನ ಶಿಕ್ಷಣ ನೀತಿಗೆ ಅಗತ್ಯ ಹಣ ಹಾಗೂ ಸಂಪನ್ಮೂಲ ಹೇಗೆ ಒದಗಿಸಲಾಗುವುದು ಎಂಬ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಶೇ.6ರಷ್ಟು ಜಿ.ಡಿ.ಪಿ.ಯನ್ನು ಶಿಕ್ಷಣಕ್ಕೆ ಒದಗಿಸಬೇಕಿದೆ. ಅದರ ಇಚ್ಛಾಶಕ್ತಿ ಹಾಗೂ ಹಣಕಾಸು ವ್ಯವಸ್ಥೆ ಶಿಕ್ಷಣ ನೀತಿಯಲ್ಲಿ ಇಲ್ಲ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.
ಕಾಲೇಜುಗಳ ಶೇ.70ರಷ್ಟು ಹುದ್ದೆಗಳಲ್ಲಿ ಗುತ್ತಿಗೆ, ತಾತ್ಕಾಲಿಕ ಹಾಗೂ ಅತಿಥಿ ಉಪನ್ಯಾಸಕರಿದ್ದಾರೆ. ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ, ಇವರೆಲ್ಲರನ್ನು ಅತಂತ್ರದಲ್ಲಿಟ್ಟು ಅರ್ಧ ಹೊಟ್ಟೆ ತುಂಬಿಸಿ ಗುಣಾತ್ಮಕ ಶಿಕ್ಷಣ ಜಾರಿಗೆ ತರಲು ಸಾಧ್ಯವಿಲ್ಲ ಎಂದವರು ಹೇಳಿದರು.
ಶಿಕ್ಷಣ ನೀತಿಯ ಬಗ್ಗೆ ಮರು ಚಿಂತನೆ, ಪರಿಷ್ಕರಣೆಯ ಅಗತ್ಯವಿದೆ. ಪ್ರಜಾಸತ್ತಾತ್ಮಕ ಚರ್ಚೆಯಾಗಬೇಕಿದೆ. ಇದರಿಂದ ದೇಶಕ್ಕೆ, ಸಮಾಜಕ್ಕೆ ಒಳ್ಳೆಯದಾಗುತ್ತದೆ. ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ನಾಗಮೋಹನ್ ದಾಸ್ ಅಭಿಪ್ರಾಯ ಪಟ್ಟರು.
ತುಮಕೂರಿನ ಚಿಂತಕ ಶ್ರೀಪಾದ್ ಭಟ್ ಮಾತನಾಡಿ, ನೂತನ ಶಿಕ್ಷಣ ನೀತಿಯನ್ನು ಒಂದೇ ದಿನದಲ್ಲಿ ಜಾರಿಗೆ ತರಲಾಗದು. ಇದಕ್ಕೆ ಬೇಕಾದ ಸಾಕಷ್ಟು ಸಿದ್ಧತೆಗಳಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ಷೇಪಿಸಿದರು.
ಬಹುತೇಕ ಬೆಂಗಳೂರಿನ ಬಲಪಂಥೀಯ ನೀತಿಯವರ ಜೊತೆ ಸಮಾ ಲೋಚನೆ ನಡೆಸುವುದಕ್ಕೆ ಸೀಮಿತವಾಗಿ ನೂತನ ಶಿಕ್ಷಣ ನೀತಿ ರಚಿಸಲಾಗಿದೆ ಎಂದೂ ಅವರು ಆರೋಪಿಸಿದರು.
ಇಪ್ಟಾ ಕಲಾವಿದರಾದ ಷಣ್ಮುಖ ಸ್ವಾಮಿ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರೂ ಆದ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಸ್ವಾಗತಿಸಿದರು.
ಜಿಲ್ಲಾ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಂತಕ ಪುರುಷೋತ್ತಮ ಬಿಳಿಮಲೆ ಮತ್ತಿತರರು ಉಪಸ್ಥಿತರಿದ್ದರು.