ಅಧಿಕಾರದಿಂದ ವಂಚಿತವಾಗದೇ ಬಿಜೆಪಿ ಜೊತೆ ಕೈ ಜೋಡಿಸಲು ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಕರೆ
ದಾವಣಗೆರೆ, ಸೆ. 7 – ಬಿಜೆಪಿ ದಲಿತ ವಿರೋಧಿ ಎಂಬುದು ಪ್ರತಿಪಕ್ಷಗಳ ಹುಸಿ ಪ್ರಚಾರವಾಗಿದೆ. ಇಂತಹ ಪ್ರಚಾರಕ್ಕೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಕಿವಿಗೊಡದೇ ಬಿಜೆಪಿಗೆ ಜೊತೆಯಾಗಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಎ. ಛಲವಾದಿ ನಾರಾಯಣ ಸ್ವಾಮಿ ಕರೆ ನೀಡಿದ್ದಾರೆ.
ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಬಿಜೆಪಿ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಿಸುತ್ತದೆ, ಮೀಸಲಾತಿ ರದ್ದುಗೊಳಿಸುತ್ತದೆ ಎಂಬೆಲ್ಲ ಅಪಪ್ರಚಾರ ಪ್ರತಿಪಕ್ಷಗಳದ್ದಾಗಿತ್ತು. ಆದರೆ, ಬಿಜೆಪಿ ಆಡಳಿತ ಯಾವ ರಾಜ್ಯದಲ್ಲೂ ಮೀಸಲಾತಿ ರದ್ದುಗೊಳಿಸಿಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತಂದಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ 370ನೇ ವಿಧಿ ರದ್ದುಗೊಳಿಸುವ ಮೂಲಕ ಅಲ್ಲಿಯೂ ಅಂಬೇಡ್ಕರ್ ಸಂವಿಧಾನ ಜಾರಿಗೆ ತಂದಿರುವುದಾಗಿ ನಾರಾಯಣ ಸ್ವಾಮಿ ಹೇಳಿದರು.
ಬಿಜೆಪಿ ಮೀಸಲಾತಿ ರದ್ದುಗೊಳಿಸುತ್ತದೆ ಎಂದು ಕೆಲ ಸಂಘಟನೆಗಳು ಹೇಳುತ್ತಿವೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ಇರಲೇ ಇಲ್ಲ. ಈ ಬಗ್ಗೆ ಸಂಘಟನೆಗಳು ಏಕೆ ಮೌನವಾಗಿದ್ದವು? ಇದೆಲ್ಲದರಿಂದಾಗಿ ಆರೋಪ ಮಾಡುತ್ತಿರುವವರ ಬಣ್ಣ ಬಯಲಾಗಿದೆ ಎಂದು ಹೇಳಿದ ಅವರು, ಬಿಜೆಪಿಯೇ ಜಮ್ಮು ಮತ್ತು ಕಾಶ್ಮೀರದ ಪರಿಶಿಷ್ಟರಿಗೆ ಮೀಸಲಾತಿ ಜಾರಿಗೆ ತಂದಿದೆ ಎಂದು ತಿಳಿಸಿದರು.
ಈ ಎಲ್ಲ ಸತ್ಯಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಈಗ ಗೊತ್ತಾಗಿದೆ. ಹೀಗಾಗಿ ಬಿಜೆಪಿ ಈಗ ದಲಿತ ಸಂಗಮವಾಗಿ ಪರಿವರ್ತನೆ ಯಾಗುತ್ತಿದೆ. ನನ್ನ ಜನರನ್ನು ಪಕ್ಷಕ್ಕೆ ತಂದು ಸೇರಿಸು ವುದು ನನ್ನ ಆದ್ಯ ಕರ್ತವ್ಯಯವಾಗಿದೆ ಎಂದರು.
ಕಾಂಗ್ರೆಸ್ ಈಗ ವಿಸರ್ಜನೆ ಆಗುವ ಮಟ್ಟಕ್ಕೆ ಬಂದಿದೆ. ಅದರ ನಾಯಕತ್ವದ ಬಗ್ಗೆ ಈಗ ಎಲ್ಲರಿಗೂ ಗೊತ್ತಾಗಿದೆ. ಕಾಂಗ್ರೆಸ್ ನಾಯಕರನ್ನು ಆಧರಿಸಿದ ಪಕ್ಷವಾಗಿದೆ. ಆದರೆ, ಬಿಜೆಪಿ ಕಾರ್ಯಕರ್ತರನ್ನು ಆಧರಿಸಿದ ಪಕ್ಷವಾಗಿದ್ದು, ಇಲ್ಲಿ ನಾಯಕತ್ವ ಗಟ್ಟಿಯಾಗಿದೆ. ಬಿಜೆಪಿ ರಾಷ್ಟ್ರವ್ಯಾಪಿಯಾಗಿ ಬೆಳೆದಿದೆ. ಇದನ್ನು ಪರಿಶಿಷ್ಟರು ಗಮನಿಸಬೇಕು. ಧಿಕ್ಕಾರ ಹಾಕಿಕೊಂಡು ಎಷ್ಟು ದಿನ ಬದುಕುತ್ತೀರಿ? ಬಿಜೆಪಿ ಸದಾ ಅಧಿಕಾರದಲ್ಲಿರಲಿದೆ. ಪರಿಶಿಷ್ಟರೂ ಸಹ ಅಧಿಕಾರದಿಂದ ವಂಚಿತರಾಗದೇ ಪಕ್ಷದ ಕಡೆ ಬರಬೇಕು ಎಂದವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜನಾಯ್ಕ, ಜಿಲ್ಲಾಧ್ಯಕ್ಷ ಹನುಮಂತನಾಯ್ಕ, ಬಿಜೆಪಿ ಮುಖಂಡರಾದ ಮಂಜಾನಾಯ್ಕ, ಅಂಜಿನಪ್ಪ, ಜಿ.ವಿ. ಗಂಗಾಧರ, ನಾಗರಾಜ ಲೋಕಿಕೆರೆ ಮತ್ತಿತರರು ಉಪಸ್ಥಿತರಿದ್ದರು.