ಡ್ರಗ್ಸ್ ದಂಧೆಗೆ ಕಠಿಣ ಕ್ರಮ, ಗೋ ಹತ್ಯೆಗೆ ಬಿಗಿ ಕ್ರಮವಿರಲಿ

ಅಂತರರಾಷ್ಟ್ರೀಯ ಹಿಂದೂ ಪರಿಷತ್ ಆಗ್ರಹ 

ದಾವಣಗೆರೆ, ಸೆ.7- ಡ್ರಗ್ಸ್ ದಂಧೆ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಗೋ ಹತ್ಯೆ ಸಂಪೂರ್ಣ ನಿಷೇಧಕ್ಕೆ ಬಿಗಿ ಕ್ರಮ ವಹಿಸಬೇಕೆಂದು ಅಂತರ ರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಪ್ರಮುಖ್ ರಾಘವೇಂದ್ರರಾವ್ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿದೆ. ವಿದ್ಯಾರ್ಥಿ ಮತ್ತು ಯುವ ಸಮೂಹವೇ ಈ ದಂಧೆಗೆ ಟಾರ್ಗೆಟ್ ಆಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಗೆ ಅಗತ್ಯ ಮಾಹಿತಿ ನೀಡುವ ಮೂಲಕ ಡ್ರಗ್ಸ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಗೋವುಗಳನ್ನು ಹಾಡುಹಗಲೇ ರಾಜಾರೋಷವಾಗಿ ಹತ್ಯೆ ಮಾಡಲಾಗುತ್ತಿದೆ. ಭಾರತೀಯ ಸಂಸ್ಕೃತಿಯ ಪ್ರತೀಕ, ಮಾತೃ ಸ್ವರೂಪಿಯಾದ ಗೋವುಗಳ ಹತ್ಯೆ ಸಂಪೂರ್ಣವಾಗಿ ನಿಷೇಧಿಸಬೇಕು. ಇದಕ್ಕಾಗಿ ಅಧಿಕಾರಿಗಳು ಬಿಗಿ ಕ್ರಮ ವಹಿಸುವ ಮುಖೇನ ಗೋವುಗಳ ರಕ್ಷಣೆಗೆ ನಿಲ್ಲಬೇಕು. ಎಲ್ಲಾ ಪಕ್ಷದವರೂ ಸಂಪೂರ್ಣ ಗೋಹತ್ಯೆ ನಿಷೇಧವನ್ನು ಬೆಂಬಲಿಸಬೇಕು. 

ಸರ್ಕಾರ, ಕಾನೂನಿಗಿಂತಲೂ ಸಾರ್ವಜನಿಕರೇ ಇದರ ವಿರುದ್ಧದ ಹೋರಾಟಕ್ಕೆ ಇಳಿಯಬೇಕೆಂದರು.

ಡಾ. ಪ್ರವೀಣ್ ತೊಗಾಡಿಯಾ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ ನ ರಾಷ್ಟ್ರೀಯ ಭಜರಂಗದಳ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, 11 ವಿವಿಧ ವಿಭಾಗಗಳ ಮೂಲಕ ಹಿಂದೂ ಸಂಸ್ಕೃತಿ, ಸಮಾಜ ಸಂಘಟಿಸುವ ಉದ್ದೇಶ ಹೊಂದಿದೆ. ಮುಂಬರುವ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಂತೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್. ಮಂಜುನಾಥ ಕಡ್ಲೇಬಾಳು, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿ.ಜಿ. ಚಂದ್ರಶೇಖರ ಮರಬದ್, ಸಹಾಯವಾಣಿ ಪ್ರಮುಖ ಸೋಮಶೇಖರ್ ಇದ್ದರು.

error: Content is protected !!