ಸಾಣೇಹಳ್ಳಿ, ಆ.8- ಅರಿವು-ಮರೆವುಗಳು ಮಾನವನಿಗೆ ವರವೇ. ಆದರೆ ಯಾವುದನ್ನು ಅರಿಯಬೇಕು, ಯಾವುದನ್ನು ಮರೆಯಬೇಕು ಎನ್ನುವ ಪ್ರಜ್ಞೆ ಮುಖ್ಯ. ಅರಿವು ಎಂದರೆ ಜ್ಞಾನ. ಮರೆವು ಎಂದರೆ ಅಜ್ಞಾನ. ಮನುಷ್ಯ ಅರಿವನ್ನು ಪಡೆದರೆ ಶರಣನಾಗುವನು. ಅಜ್ಞಾನದಲ್ಲೇ ಮುಂದುವರಿದರೆ ಮಾನವನಾಗಿಯೇ ಉಳಿಯುವನು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶ್ರೀಗಳು ನುಡಿದರು.
ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಿವು, ಅಜ್ಞಾನ ಎರಡೂ ನಮ್ಮ ಮನದಲ್ಲೇ ಮನೆಮಾಡಿಕೊಂಡಿವೆ. ಯಾವುದು ಎಷ್ಟು ಪ್ರಮಾಣದಲ್ಲಿದೆ ಎನ್ನುವ ಆಧಾರದ ಮೇಲೆ ವ್ಯಕ್ತಿತ್ವದ ವಿಕಾಸ ಅಥವಾ ಅವನತಿ ಆಗುವುದು. ಮರೆವು ಸಾಮಾನ್ಯವಾದದ್ದೇನಲ್ಲ. ಮನುಷ್ಯನಿಗೆ ಲೌಕಿಕ ಚಿಂತೆಯ ಜೊತೆಗೆ ಶಿವ ಚಿಂತೆಯೂ ಬೇಕು. ಶಿವ ಸಂಸ್ಕಾರ ಪಡೆದು ಶರಣನಾಗುವುದೇ ಮಾನವನ ಗುರಿಯಾಗಬೇಕು. ಅದಕ್ಕಾಗಿ ಶಿವನನ್ನು ಮರೆಯದೆ ಪೂಜಿಸು ಎನ್ನುವುದು ಬಸವಣ್ಣನವರ ಸಲಹೆ. ಪೂಜಿಸುವುದು ಗುಡಿಯಲ್ಲಿರುವ ಶಿವನ ಪ್ರತಿಮೆಯನ್ನಲ್ಲ. ನಮ್ಮೊಳಗೇ ಆ ಶಿವ ಚೇತನ ಇದೆ. ಅದರ ಸಂಕೇತವಾಗಿ ಗುರುವಿನಿಂದ ಇಷ್ಟಲಿಂಗದೀಕ್ಷೆ ಪಡೆದು ಆ ಲಿಂಗವನ್ನು ಪೂಜಿಸಿರಿ ಎಂದು ವಚನಕಾರರು ತಿಳಿಸಿದ್ದಾರೆ ಎಂದರು.
ಮಾನವ ಕೇವಲ ಉಂಡು-ಉಟ್ಟು-ನಕ್ಕು-ನಲಿಯಲು ಈ ಭೂಮಿಗೆ ಬಂದಿಲ್ಲ. ಈ ದೇಹ ದೇವರನ್ನು ಒಲಿಸಲು ಬಂದಿರುವ ಪವಿತ್ರ ಶರೀರ. ಆದರೆ ಅದೆಷ್ಟೋ ಜನರು ದೇಹವನ್ನು ಒಂದು ಚರಂಡಿ ಮಾಡಿಕೊಂಡಿರುತ್ತಾರೆ. ಅಂದರೆ ಕುಡಿಯಬಾರದ್ದನ್ನು ಕುಡಿಯುವರು. ತಿನ್ನಬಾರದ್ದನ್ನು ತಿನ್ನುವರು. ಮುಟ್ಟಬಾರದ್ದನ್ನು ಮುಟ್ಟುವರು. ಅಂಥವರು ಮಾನವರಾಗಿಯೇ ಉಳಿಯುವರೇ ಹೊರತು ಶರಣತ್ವಕ್ಕೇರಲು ಸಾದ್ಯವಿಲ್ಲ. ಕೆಲವೊಮ್ಮೆ ಅವರ ಹೀನ ನಡವಳಿಕೆಯಿಂದ ಮಾನವತ್ವದಿಂದಲೂ ಕೆಳಗಿಳಿದು ಕ್ಷುದ್ರ ಹುಳುವಿನಂತಾಗುವರು ಎಂದರು.
ಶರಣ ಎಂದರೆ ಸಜ್ಜನ, ಸದ್ಭಕ್ತ, ಅನುಭಾವಿ. ನಿರಾಸೆ ಮತ್ತು ನಿರ್ಭಯ ಶರಣನ ಲಕ್ಷಣ. ಅವನು ಕಾಯಕದಿಂದ ಬಂದುದನ್ನು ಮಾತ್ರ ಸ್ವೀಕರಿಸುವವನು. ಕಾಯಕ ಶ್ರದ್ಧೆಯಿಂದ ಬಾರದ ಆದಾಯವನ್ನು ತಿರಸ್ಕರಿಸುವನು. ತಾನು ನಂಬಿದ ತತ್ವಗಳಿಗೆ ಬದ್ಧನಾಗಿ ಬಾಳುವನು. ತನ್ನ ಪ್ರಾಣಕ್ಕೇ ಕುತ್ತು ಬಂದರೂ ತತ್ವಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ. ಹುಟ್ಟಿದವರು ಒಂದಿಲ್ಲೊಂದು ದಿನ ಸಾಯಲೇಬೇಕು. ಕ್ಷುಲ್ಲಕ ಬಾಳು ಬಾಳುವುದಕ್ಕಿಂತ ಧೀರೋದಾತ್ತರಾಗಿ ಆದರ್ಶಕ್ಕಾಗಿ ಸಾಯುವುದೇ ಮೇಲೆಂದು ವಾದಿಸಿ ಅದರಂತೆ ನಡೆಯುವರು. ಶರಣರಾಗಿದ್ದರು ಎಂದರೆ ಅಜ್ಞಾನ ನಿವಾರಿಸಿಕೊಂಡು ಸುಜ್ಞಾನಿಗಳಾಗಿದ್ದರು ಎಂದೇ ಅರ್ಥ ಎಂದು ಹೇಳಿದರು.
§ಅರಿತರೆ ಶರಣ – ಮರೆತರೆ ಮಾನವ¬ ಕುರಿತಂತೆ ಪುತ್ತೂರಿನ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲಾ ಮಾತನಾಡಿ, ಕರೋನಾ ಕಾರಣದಿಂದ ಮನುಷ್ಯ-ಮನುಷ್ಯರ ಮಧ್ಯೆ ಕತ್ತಲೆ, ಖಾಲಿತನ ಸೃಷ್ಟಿಯಾಗಿದೆ. ಪರಸ್ಪರ ಮುಖಾಮುಖಿಯಾಗದೆ ವಿಚಾರ ವಿನಿಮಯ ಮಾಡಿಕೊಳ್ಳುವ ಅನಿವಾರ್ಯತೆ ಬಂದಿದೆ. ಬಸವಾದಿ ಶರಣರ ವಚನಗಳು ನಮ್ಮೊಳಗಿನ ಕತ್ತಲೆಯನ್ನು, ಖಾಲಿತನವನ್ನು ಓಡಿಸುವ ಬೆಳಕಾಗಿದೆ. ಮಾನವ ಅರಿತಾಗ ಶರಣನಾಗುವನು, ಶರಣ ಮರೆತಾಗ ಮಾನವನಾಗುವನು. ಶರಣಾಗು ಎಂದರೆ ತಲೆಬಾಗುವುದು, ತಾಳ್ಮೆ, ರಾಜಿಯಾಗು, ಸೋಲು ಎಂದರ್ಥ. ಇಂಥ ಶರಣತ್ವವನ್ನು ನಮಗೆ ಕೊಟ್ಟದ್ದು ಶರಣರ ವಚನಗಳು. ಇಂಥ ವಚನಗಳ ಒಳಹೊಕ್ಕು ನಾವು ಶರಣಾದರೆ ಕನಿಷ್ಟ ಮಾನವತ್ವದ ಅರಿವಾಗುವುದು ಎಂದರು.
ಅರಿವು ಎಂದರೆ ಕೇವಲ ಜ್ಞಾನವೇ ಅಥವ ಸರಿಯಾದ ಮಾರ್ಗದಲ್ಲಿ ನಡೆಯುವುದೇ, ಮರೆವು ಎಂದರೆ ಜ್ಞಾನವನ್ನು ಮರೆಯುವುದೇ, ವಿಮುಖವಾಗಿ ಚಲಿಸುವುದೇ ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ನಿಜವಾದ ಶರಣರನ್ನು, ಮಾನವರನ್ನು ಹುಡುಕುವ ಪ್ರಯತ್ನವನ್ನು ಈ ಸಂದರ್ಭದಲ್ಲಿ ಮಾಡಬೇಕು. ಎರಡು ರೀತಿಯ ಶರಣರು, ಮಾನವರು ಇದ್ದಾರೆ. ಒಂದು ನಿಜವಾದ ಶರಣರು. ಇನ್ನೊಂದು ನಿಜವಾದ ಮಾನವರು. ಇನ್ನೊಂದು ಮುಖವಾಡದ ಶರಣರು, ಮುಖವಾಡದ ಮಾನವರು. ಇವರನ್ನು ಪತ್ತೆಹಚ್ಚುವುದು, ವಿಂಗಡಿಸುವುದು ಸುಲಭವಲ್ಲ. ಗೆರೆ ಹಾಕಿ ವಿಂಗಡಿಸುವ ವಿಷಯಗಳಲ್ಲ. ಅತ್ಯಂತ ಸೂಕ್ಷ್ಮವಾದವು ಎಂದರು.
ಅಧ್ಯಾಪಕ ಜಿ ಎಸ್ ಗಿರಿಜಾ ಶಂಕರ್ ಸ್ವಾಗತಿಸಿದರು. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ದುಮ್ಮೇನಹಳ್ಳಿಯ ಗುತ್ತಿಗೆದಾರ ಡಿ. ಬಿ. ಜಯದೇವಪ್ಪ ಇಂದಿನ ಕಾರ್ಯಕ್ರಮದ ದಾಸೋಹಿಗಳಾಗಿದ್ದರು.