ವಿಟಿಯು ವಿರುದ್ಧ ಯುವ ಭಾರತ್ ಗ್ರೀನ್ ಬ್ರಿಗೇಡ್ ಆರೋಪ
ದಾವಣಗೆರೆ, ಸೆ.2- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ತನ್ನ ಅಧೀನ ಕಾಲೇಜುಗಳಲ್ಲಿ ಹಾಗೂ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರಿಗೆ ನೀಡುವ ಸಂಬಳದಲ್ಲಿ ಕೇವಲ ತಿಂಗಳ ಸಂಬಳ ಉಳಿಸಲು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದೊಂದಿಗೆ ಪ್ರತಿ ಸೆಮಿಸ್ಟರ್‌ನಲ್ಲೂ ಚೆಲ್ಲಾಟವಾಡುತ್ತಿದೆ ಎಂದು ಯುವ ಭಾರತ್ ಗ್ರೀನ್ ಬ್ರಿಗೇಡ್ ಆರೋಪಿಸಿದೆ.
ಪ್ರತಿ ವರ್ಷ ಶೈಕ್ಷಣಿಕ ವರ್ಷ ಪ್ರಾರಂಭವಾದಾಗ ವಿಶ್ವವಿದ್ಯಾನಿಲಯದ ಅನುಮತಿ ಪಡೆದು ಸಂದರ್ಶನ ಪ್ರಕ್ರಿಯೆ ಪೂರ್ಣಗೊಳಿಸುವಷ್ಟರಲ್ಲಿ ಒಂದು ತಿಂಗಳು ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುವುದಿಲ್ಲ.
ವಿವಿ ಸಂದರ್ಶನ ಪ್ರಕ್ರಿಯೆ ರಜೆಯಲ್ಲಿ ಮಾಡಬಹುದಾಗಿದೆ. ಕಾರಣ ಸಂಬಳ ಉಳಿಸುವುದಾಗಿದೆ. ವರ್ಷದಲ್ಲಿ 4 ತಿಂಗಳ ಕಾಲ ಅತಿಥಿ ಉಪನ್ಯಾಸಕರನ್ನು ಮನೆಯಲ್ಲಿ ಕೂರಿಸುತ್ತಾರೆ. ಅದರೊಂದಿಗೆ ಒಂದು ತಿಂಗಳ ಕಾಲ ವಿಳಂಬವಾಗಿ ಪ್ರಕ್ರಿಯೆ ನಡೆಸುತ್ತಾರೆ ಎಂದು ದೂರಿದ್ದಾರೆ.
ವಿದ್ಯಾರ್ಥಿಗಳು ತಮಗೆ ಆಗುತ್ತಿರುವ ತೊಂದರೆ ಕುರಿತು ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಉನ್ನತ ಶಿಕ್ಷಣ ಮಂತ್ರಿಗಳು ಒಂದಿಷ್ಟು ಗಮನಿಸಿ, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮುಖ್ಯಮಂತ್ರಿಗಳಿಗೂ ಮನವಿ ಮಾಡುತ್ತಿರುವುದಾಗಿ ಬ್ರಿಗೇಡ್‌ನ ಅಧ್ಯಕ್ಷ ನಾಗರಾಜ್ ಸುರ್ವೆ ತಿಳಿಸಿದ್ದಾರೆ.