ದಾವಣಗೆರೆ, ಸೆ.2- ಸುಪ್ರೀಂ ಕೋರ್ಟ್‍ನ ಐವರು ನ್ಯಾಯಮೂರ್ತಿಗಳ ಪೀಠವು ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಿ ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಿರುವ ಶೇ.15ರಷ್ಟು ಮೀಸಲಾತಿಯಲ್ಲಿ ವರ್ಗೀಕರಿಸಿ ಒಳ ಮೀಸಲಾತಿಯನ್ನು ಕಲ್ಪಿಸುವಂತೆ ದಾವಣಗೆರೆ ಅಸ್ಪೃಶ್ಯರ ಹಿತರಕ್ಷಣಾ ವೇದಿಕೆಯು ಆಗ್ರಹಿಸಿದೆ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ವರ್ಗೀಕರಿಸಬೇಕೆಂದು ಒಂದೇ ವರ್ಗ ಎಂಬ ಕಾರಣಕ್ಕೆ ಹಣ್ಣುಗಳ ಬುಟ್ಟಿಯನ್ನು ಬಲಶಾಲಿ ಜಾತಿಗಳಿಗೆ ಮಾತ್ರ ನೀಡಲಾಗುವುದಿಲ್ಲ. ಇದರಿಂದ ಇತರೆ ದಮನಿತ ಜಾತಿಗಳ ಜನರಿಗೆ ಅನ್ಯಾಯವಾಗಲಿದೆ ಎಂದು ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೇಳಿರುವುದರ ಹಿಂದೆ ಸಾಮಾಜಿಕ ನ್ಯಾಯ ಅಡಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಲತಲಾಂತರಗಳಿಂದ ಎಲ್ಲಾ ರಂಗಗಳಲ್ಲಿಯೂ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕೆಂಬ ದಲಿತ ಸಂಘಟನೆಗಳ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ 2005ರಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು ರಚಿಸಿತ್ತು. ಈ ಆಯೋಗವು ಸುಮಾರು ಏಳು ವರ್ಷಗಳ ಕಾಲ ರಾಜ್ಯಾದ್ಯಂತ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗೆ ನಿಗದಿ ಮಾಡಿರುವ ಶೇ.15ರಷ್ಟು ಮೀಸಲಾತಿಯಲ್ಲಿ ಶೇ. 6ರಷ್ಟು ಮಾದಿಗ ಸಮುದಾಯಗಳಿಗೆ, ಶೇ.5ರಷ್ಟು ಹೊಲೆಯ ಸಮುದಾಯಗಳಿಗೆ, ಶೇ.3ರಷ್ಟು ಎಸ್‍ಸಿ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗೆ ಮತ್ತು ಶೇ.1ರಷ್ಟು ಮೀಸಲಾತಿಯನ್ನು ಬೇಡ ಜಂಗಮ, ಬುಡುಗ ಜಂಗಮ ಸಮುದಾಯಗಳಿಗೆ ನೀಡಬೇಕೆಂದು ಶಿಫಾರಸ್ಸು ಮಾಡಿ 2012ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಪಕ್ಷ ಸೇರಿದಂತೆ ಈವರೆಗೂ ಆಡಳಿತ ನಡೆಸಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸಹ ಚುನಾವಣೆಯಲ್ಲಿ ತಮ್ಮ ಪಕ್ಷಗಳಿಗೆ ಹಿನ್ನಡೆ ಉಂಟಾಗಲಿದೆ ಎಂಬ ಏಕೈಕ ಕಾರಣದಿಂದಾಗಿ ಈ ವರದಿಯನ್ನು ಅನುಷ್ಠಾನಗೊಳಿಸಿರಲಿಲ್ಲ ಎಂದರು.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಈಗಿನ ಬಿಜೆಪಿ ಸರ್ಕಾರದಲ್ಲಿನ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಸುಪ್ರೀಂ ಕೋರ್ಟ್‍ನ ಐವರು ನ್ಯಾಯಮೂರ್ತಿಗಳ ಪೀಠ ನೀಡಿರುವ ತೀರ್ಪಿನ ಆಧಾರದಲ್ಲಿ ಒಳ ಮೀಸಲಾತಿ ಕಲ್ಪಿಸಲಾಗುವುದಿಲ್ಲ. ಆದರೆ, ಏಳು ಅಥವಾ ಒಂಭತ್ತು ಜನ ನ್ಯಾಯಮೂರ್ತಿಗಳ ಪೀಠವು ಒಳ ಮೀಸಲಾತಿ ಕಲ್ಪಿಸುವ ಬಗ್ಗೆ ತೀರ್ಪು ನೀಡಿದರೆ ಅದನ್ನು ಅನುಷ್ಠಾನಗೊಳಿಸಬಹುದು ಎಂಬುದಾಗಿ ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವೇದಿಕೆಯ ಕೆ. ಮಹಾದೇವನ್, ಎಚ್. ಬಸವರಾಜ್, ತಿಪ್ಪೇಶಿ ಕುಳಗಟ್ಟೆ, ಹೊನ್ನಾಳಿ ಮಹಾಂತೇಶ್, ಪುರುಷೋತ್ತಮ ಪತ್ರಿಕಾಗೋಷ್ಠಿಯಲ್ಲಿ ಇದ್ದರು.