ಕೃಷಿಯಲ್ಲಿ ಸಾವಯವ ರೀತಿಯಲ್ಲಿ ಸಸ್ಯ ಸಂರಕ್ಷಣೆ

ದಾವಣಗೆರೆ ಸೆ. 2-  ಜಿಲ್ಲೆಯಾದ್ಯಂತ  ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಉತ್ತಮ ಬೆಳೆ ನಿರೀಕ್ಷೆ ಯಲ್ಲಿದ್ದು, ಉತ್ತಮ ಇಳುವರಿ ಪಡೆಯಲು ಇರುವ ಅನೇಕ ಅಡೆತಡೆಗಳಲ್ಲಿ ಕೀಟ ಹಾಗೂ ರೋಗಗಳ ಬಾಧೆಯು ಒಂದಾಗಿದೆ. ರಾಸಾಯನಿಕ ಕೃಷಿಯಿಂದ ಹೊರಗೆ ಬಂದು ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆ ಕೈಗೊಳ್ಳಬೇಕೆಂಬ ಆಕಾಂಕ್ಷೆ, ಮಣ್ಣಿನ ಫಲವತ್ತತೆ, ಪರಿಸರ ಕಾಪಾಡುವ ಕಾಳಜಿಯಿಂದ ಬಹಳಷ್ಟು ರೈತರು ಸಾವಯವ, ನೈಸರ್ಗಿಕ, ಶೂನ್ಯ ಬಂಡವಾಳ, ಚೈತನ್ಯ ಕೃಷಿಯತ್ತ ಒಲವು ತೋರಿದ್ದಾರೆ. ಅಂತಹ ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತ ಬಾಂಧವರು ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತಿರುವ ಬೆಳೆಗಳಲ್ಲಿ ಕೀಟ ಹಾಗೂ ರೋಗಬಾಧೆಗಳನ್ನು ನಿರ್ವಹಿಸಲು ಸಲಹೆಗಳು ಈ ಕೆಳಗಿನಂತಿವೆ

ಪ್ರಕೃತಿಯಲ್ಲಿ ಜೈವಿಕ ಸರಪಳಿ ಆಧಾರದ ಮೇಲೆ ಕೆಲ ಅಪಕಾರಿ ಕೀಟಗಳನ್ನು ತಿಂದು ಬದು ಕುವ  ಹಾಗೂ ರೈತರಿಗೆ ಪರೋಪಕಾರಿಯಾಗಿರುವ ಕೀಟಗಳೂ ಇವೆ. ಗುಲಗಂಜಿ ಹುಳು, ಅಪ್ಸರ ಕೀಟದಂತಹ ಉಪಕಾರಿ ಕೀಟಗಳು  ಹೆಚ್ಚಿನ ಸಂಖ್ಯೆ ಯಲ್ಲಿದ್ದಷ್ಟು ಅಪಕಾರಿ ಕೀಟಗಳು ಕಡಿಮೆಯಾ ಗುತ್ತವೆ. ಆದ್ದರಿಂದ ಈ ಉಪಕಾರಿ ಕೀಟಗಳನ್ನು ಉಳಿಯುವಂತೆ, ಬೆಳೆಯುವಂತೆ ನೋಡಿಕೊಳ್ಳ ಬೇಕು. ರಾಸಾಯನಿಕ ಹಾಗೂ ಸಾವಯವ ಜಮೀನುಗಳ ಮಧ್ಯೆ ಅಂತರ ಕಾಪಾಡಿಕೊಳ್ಳಬೇಕು. ಜಮೀನನ್ನು ಅಂತರಬೇಸಾಯ  ಮಾಡಿ ಕಳೆ ತೆಗೆದು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಕೀಟಗಳ ಹಾವಳಿ ನಿರ್ವಹಿಸಬಹುದು.

ಎಲೆ ತಿನ್ನುವ ಹುಳು, ಕಾಂಡಕೊರಕ ಹಾಗೂ ಕಾಯಿಕೊರಕಗಳನ್ನು ಸಾಧ್ಯವಾದಷ್ಟು ಕೈಯಿಂದ ಆರಿಸಿ ತೆಗೆದು ಸೋಪಿನ ನೀರಿನಲ್ಲಿ ಹಾಕಿ ನಿರ್ವಹಣೆ ಮಾಡಬೇಕು. ಜಮೀನಿನ ಸುತ್ತ ಟೊಂಗೆಗಳನ್ನು ನೆಟ್ಟು, ಹೊಲದಲ್ಲಿ ಸುತ್ತಲು ಅನ್ನ ಅಥವಾ ಮಂಡಕ್ಕಿ ಚೆಲ್ಲಿ ಪಕ್ಷಿಗಳನ್ನು ಆಕರ್ಷಿಸುವುದರಿಂದ ಪಕ್ಷಿಗಳು ಹುಳುಗಳನ್ನು ಆಯ್ದು ತಿನ್ನುತ್ತವೆ. ಈ ವಿಧಾನಗಳ ಅನುಸರಣೆಯಿಂದ ನಿರ್ವಹಣೆ ಆಗದಿದ್ದ ಪಕ್ಷದಲ್ಲಿ ಸಸ್ಯ ಜನ್ಯ ಕೀಟನಾಶಕಗಳನ್ನು ಬಳಸಬಹುದು.

ಎಲೆ ತಿನ್ನುವ ಹುಳುವಿನ ಬಾಧೆ ತಡೆಯಲು 50 ಗ್ರಾಂ. ಅರಿಶಿನ ಪುಡಿಯನ್ನು 1 ಲೀ. ಹಸುವಿನ ಗಂಜಲದಲ್ಲಿ 2 ದಿನಗಳ ಕಾಲ ನೆನೆಸಿ ನಂತರ 5 ಲೀ. ನೀರನ್ನು ಬೆರೆಸಿ ಸಿಂಪಡಿಸಬೇಕು. ಕಾಯಿಕೊರಕ ಮತ್ತು ಕಂಬಳಿ ಹುಳುವಿನ ಬಾಧೆಗೆ 25 ಗ್ರಾಂ. ಹಸಿಮೆಣಸಿನಕಾಯಿ ಮತ್ತು 60 ಗ್ರಾಂ ಉಪ್ಪನ್ನು ನುಣ್ಣಗೆ ಅರೆದು 12 ಘಂಟೆಗಳ ಕಾಲ ನೆನೆಸಿ ನಂತರ 8 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಸ್ಯ ಹೇನು, ಜಾಸಿಡ್ಸ್ (ಜಿಗಿಹುಳು) ಬಾಧೆಗೆ ಬೆಳ್ಳುಳ್ಳಿ ಹಾಗೂ ಹಸಿಮೆಣಸಿನಕಾಯಿಯನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ ರುಬ್ಬಿ 1 ಮಿ.ಲೀ. ದ್ರಾವಣಕ್ಕೆ 100ಮಿ.ಲೀ. ನೀರು ಬೆರೆಸಿ ಸಿಂಪಡಿಸಬೇಕು.

ನುಸಿ, ಸಸ್ಯಹೇನು ಮತ್ತು ಶಿಲೀಂಧ್ರ ರೋಗಗಳು ಕಂಡುಬಂದಲ್ಲಿ 50 ಗ್ರಾಂ. ಬೆಳ್ಳುಳ್ಳಿಯನ್ನು ಸ್ವಲ್ಪ ನೀರಿನೊಂದಿಗೆ  ರುಬ್ಬಿ ದ್ರಾವಣ ತಯಾರಿಸಿ ಶೋಧಿಸಿಟ್ಟುಕೊಳ್ಳಬೇಕು. 5 ಗ್ರಾಂ. ಎಕ್ಕದ ಎಲೆ, 50 ಗ್ರಾಂ ತುಳಸಿ, 50 ಗ್ರಾಂ. ಲಕ್ಕಿ ಎಲೆಗಳನ್ನು ರುಬ್ಬಿ 100 ಮಿ.ಲೀ. ನೀರಿನಲ್ಲಿ 1 ದಿನ ನೆನೆಸಿ ಶೋಧಿಸಿಟ್ಟುಕೊಳ್ಳಬೇಕು.ಈ ಎರಡೂ ದ್ರಾವಣಗಳನ್ನು ಚೆನ್ನಾಗಿ ಮಿಶ್ರಮಾಡಿ, 10 ಮಿ.ಲೀ. ಬೇವಿನ ಎಣ್ಣೆ ಹಾಗೂ 20 ಲೀ. ನೀರು ಬೆರೆಸಿ ಸಿಂಪಡಿಸಬೇಕು. ಬಿಳಿ ನೊಣ, ಎಲೆ ತಿನ್ನುವ ಹುಳು, ಇತರೆ ಹುಳುಗಳ ಬಾಧೆಗೆ 100 ಗ್ರಾಂ ಹಸಿಮೆಣಸಿನಕಾಯಿ, 1 ಬೆಳ್ಳುಳ್ಳಿ, 1 ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ 1 ರಾತ್ರಿ ನೀರಿನಲ್ಲಿ ನೆನೆಸಿ ಶೋಧಿಸಿ 1.8 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಲ್ಲಾ ದ್ರಾವಣಗಳನ್ನು ಬೆಳೆಯ ಅವಧಿ ಹಾಗೂ ಗಿಡದ ಬೆಳವಣಿಗೆಗೆ ಅನುಗುಣವಾಗಿ ಎಕರೆಗೆ ಬೇಕಾಗುವಷ್ಟು ಸಿಂಪರಣಾ ದ್ರಾವಣ ತಯಾರಿಸಿಕೊಳ್ಳಬಹುದು. ಬೇವಿನ ಬೀಜ ಆಧಾರಿತ ಕೀಟನಾಶಕಗಳನ್ನು ಸಹ ಬಳಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದ್ದಾರೆ.

error: Content is protected !!