ದಾವಣಗೆರೆ, ಆ.31- ಚಂದ್ರದರ್ಶನ ದಿಂದ ಪ್ರಾರಂಭವಾಗುವ ಮುಸ್ಲಿಂ ಬಾಂಧವರ ಹೊಸ ವರ್ಷದ ಸಂಕೇತವಾಗಿರುವ ಮೊಹರಂ `ಯಾದೇ ಹುಸೇನ್’ ಹಬ್ಬವನ್ನು ನಗರಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು.
ಸಂಪ್ರದಾಯದಂತೆ ಚಂದ್ರದರ್ಶನವಾದ ಮೇಲೆ ನಗರದ ವಿವಿಧ ಪ್ರದೇಶಗಳಲ್ಲಿ ಆಲೇ ದೇವರು (ಪಂಜಾಗಳು 10 ದಿನಗಳ ಕಾಲ ಕೂರಿಸಿ ಸಾರ್ವಜನಿಕರಿಗೆ ದರ್ಶನ, ಹರಕೆ ಅರ್ಪಿಸಿದರು. ಭಾವೈಕತೆಯ ಪ್ರತಿಬಿಂಬವಾಗಿ ರುವ ಈ ಹಬ್ಬದ ಆಚರಣೆಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಒಗ್ಗೂಡಿ ಸಾಲು ಸಾಲಾಗಿ ನಿಂತು ಅಲಾಯಿ ದೇವರ ದರ್ಶನ ಪಡೆದು ಓದುಕೆ (ಫಾತೇಹಾ) ಮಾಡಿಸಿಕೊಳ್ಳುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಹಬ್ಬ ಆಚರಣೆಯಲ್ಲಿ ಗೊಂದಲ : ಚಂದ್ರದರ್ಶನದ ಹತ್ತನೇ ದಿನಕ್ಕೆ `ಯೌಮೇ ಅಶುರಾ’ ಪಡಿಸಲಾಗುವುದು. ಅದರಂತೆ ನಗ ರದ ಎಲ್ಲ ಮುಸೀದಿಗಳಲ್ಲಿ ಭಾನುವಾರ ದಂದು 10 ನೇ ದಿನ ಆಚರಿಸಿ, ವಿಶೇಷ ಪ್ರಾರ್ಥನೆ ಫಾತೇಹಾ ಸಿಹಿ, ಖಿಚಡಾ ವಿತರಿಸಲಾಯಿತು. ಆದರೆ ನಗರದ ವಿವಿಧ ಪ್ರದೇಶಗಳಲ್ಲಿ ಪಂಜಾ ಗಳು ಕೂರಿಸಿದ ಮೌಲಾ ಅಲಿ ಮಕಾನ್ ಸಮಿತಿಯವರು ಸೋಮವಾರದಂದು ಹತ್ತನೇ ದಿನ ಆಚರಿಸಿ ಮೊಹರಂ ಹಬ್ಬಕ್ಕೆ ತೆರೆ ಎಳೆದರು. ಹೀಗಾಗಿ ನಗರ ಹಾಗೂ ಗ್ರಾಮಾಂ ತರ ಪ್ರದೇಶದ ಜನರಿಗೆ ಹಬ್ಬ ಆಚರಣೆಯ ನಿಗದಿತ ದಿನ ಸ್ವಲ್ಪ ಗೊಂದಲ ಸೃಷ್ಟಿಸಿತು.
ಹಜರತ್ ಸೈಯದ್ ಖಡಕ್ ಷಾವಲಿ ದರ್ಗಾದಲ್ಲಿ ಕೂರಿಸಿದ್ದ ಪಂಜಾಗಳು ಇಂದು ಸಾಯಂಕಾಲ ಹೊಂಡದ ವೃತ್ತದಲ್ಲಿರುವ ಹಜರತ್ ಸೈಯದ್ ರತನ್ ಷಾವಲಿ ದರ್ಗಾಕ್ಕೆ ತಲುಪಿ ಅಂತಿಮ ದಿನದ ಶ್ಲೋಕಗಳನ್ನು ಓದುತ್ತಾ ತಮ್ಮ ಸ್ಥಳಕ್ಕೆ ಹಿಂದಿರುಗಿದವು.
ಕೊರೊನಾ ಸೋಂಕಿನ ಭೀತಿಯಿಂದಾಗಿ ಜಿಲ್ಲಾಡಳಿತದ ಆದೇಶಕ್ಕೆ ಬದ್ಧರಾಗಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಆಚರಿಸಿದ ಈ ಬಾರಿ ಮೊಹರಂ ಹಬ್ಬದಲ್ಲಿ ಸಾರ್ವಜನಿಕ ತಖರೀರ್ (ಉಪನ್ಯಾಸ) ಕಾರ್ಯಕ್ರಮಗಳು ಪಂಜಾಗಳ ಮೆರವಣಿಗೆ ಇರಲಿಲ್ಲ. ಹೀಗಾಗಿ ಈ ವರ್ಷದ ಮೊಹರಂ ಹಬ್ಬವನ್ನು ಸರಳ ರೀತಿಯಿಂದ ಆಚರಿಸಲಾಯಿತು.
ಮಸೀದಿಗಳಲ್ಲಿ ಕಳೆದ 10 ದಿನಗಳಿಂದ ಮೊಹರಂ ಉಪನ್ಯಾಸ ನೀಡಲಾಯಿತು. ಸಿಹಿ ವಿತರಿಸಲಾಯಿತು. ನಗರದ ವಿವಿಧ ಬಡಾವಣೆಗಳಲ್ಲಿ ಸಂಘ-ಸಂಸ್ಥೆಯ ಷರಬತ್ ವಿತರಿಸಲಾಯಿತು.
ವಿನೋಬನಗರ, ಕೆ.ಟಿ.ಜೆ. ನಗರ, ಆಹಮ್ಮದ್ ನಗರ, ಬೇತೂರು ರಸ್ತೆ ಸೇರಿದಂತೆ ಅಖ್ತರ್ ರಜಾ ಸರ್ಕಲ್, ರಿಂಗ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆಲೇ ದೇವರನ್ನು ಕೂರಿಸಲಾಗಿತ್ತು.
ಬಿ. ಸಿಕಂದರ್