ಮೂತ್ರಪಿಂಡ ವೈಫಲ್ಯ : ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ

ರಾಣೇಬೆನ್ನೂರು, ಆ.29- ಸೂಕ್ತವಾಗಿ ಡಯಾಲಿಸಿಸ್ ಚಿಕಿತ್ಸೆ ಸಿಗದೇ ಸಂಕಷ್ಟಕ್ಕೆ ಸಿಲುಕಿರುವ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಉಪ ತಹಶೀಲ್ದಾರ್‌ ಮಂಜುನಾಥ್‌ ಹಾದಿಮನಿ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರಾಣೇಬೆನ್ನೂರಿನ ನಾಗರಾಜ್‌ ಬಾದಾಮಿ ಮಾತನಾಡಿ, ರಾಣೇಬೆನ್ನೂರು ತಾಲ್ಲೂಕಿನಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸುಮಾರು 10 ಕ್ಕೂ ಹೆಚ್ಚು ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೇ ಬಳಲುತ್ತಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 100 ಹಾಸಿಗೆ ಹೊಂದಿದ್ದರೂ ಕೇವಲ‌ ಒಂದು ಡಯಾಲಿಸಿಸ್ ಘಟಕ ಇದೆ. ಇದರಲ್ಲಿ ತಾಲ್ಲೂಕು ಸೇರಿದಂತೆ ಬ್ಯಾಡಗಿ, ಹಿರೇಕೆರೂರು ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.  ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮೂತ್ರಪಿಂಡ ರೋಗಿಗಳಿಗೆ ಡಯಾಲಿಸಿಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. 

ಡಯಾಲಿಸಿಸ್‌ ಘಟಕವನ್ನು ಕೂಡ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದರಿಂದ ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ತೀವ್ರ ತೊಂದರೆಯಾಗಿದ್ದು, ಚಿಕಿತ್ಸೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಂತಹ ನೋವುಗಳನ್ನು ಅನುಭವಿಸುವ ಬದಲು ದಯಾಮರಣ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದರು.

error: Content is protected !!