ಕೊರೊನಾ ಹೆಚ್ಚಳ ಸಾಧ್ಯತೆ: ಹೆಚ್ಚು ವೈದ್ಯಕೀಯ ಸಿಬ್ಬಂದಿ ನೇಮಿಸಿಕೊಳ್ಳಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಉಮಾಶಂಕರ್

ದಾವಣಗೆರೆ, ಆ.29- ಕೊರೊನಾ  ಸೋಂಕಿನ ವಿಚಾರದಲ್ಲಿ ಸೋಂಕಿನ ಭಯಕ್ಕಿಂತ ಅಪಪ್ರಚಾರಗಳೇ ಹೆಚ್ಚು ಭಯ ಪಡಿಸುತ್ತಿವೆ. ಹಾಗಾಗಿ ಐಇಸಿ ತಂಡ, ಆರೋಗ್ಯ ಇಲಾಖೆ ಹಾಗೂ ವಾರ್ತಾ ಇಲಾಖೆ ಜಂಟಿಯಾಗಿ ಕ್ರಮ ವಹಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹೇಳಿದರು.

ಶನಿವಾರ ಜಿಲ್ಲಾ ಡಳಿತ ಭವ ವನದಲ್ಲಿ ಕೋವಿಡ್-19 ಕುರಿತು ಹಮ್ಮಿ ಕೊಳ್ಳ ಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕೊರೊನಾ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಪ್ರಚಾರ ನಡೆಸುವ ಅಗತ್ಯವಿದೆ ಎಂದರು. ಮುಂದಿನ ದಿನಗಳಲ್ಲಿ ಕೊರೊನಾ ಕೇಸ್‍ಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ವನ್ನು ಹೆಚ್ಚಿಸಿಕೊಳ್ಳಲು ಜಿಲ್ಲಾಡಳಿತ ಗಮನಹರಿಸಬೇಕು. ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ನೇಮಿಸಿಕೊಳ್ಳಲು ಕಾರ್ಯೋನ್ಮುಖವಾಗಬೇಕು ಎಂದರು.

‘ಕೊರೊನಾ ವೈರಸ್ ಬಗ್ಗೆ ಭಯಬೇಡ, ಎಚ್ಚರವಿರಲಿ’ ಎಂಬ ಸಂದೇಶದೊಂದಿಗೆ ವಾಹನಗಳಲ್ಲಿ ಬ್ಯಾನರ್‍ಗಳ ಮೂಲಕ, ಭಿತ್ತಿಪತ್ರಗಳು, ಕರಪತ್ರಗಳು, ಸೇರಿದಂತೆ ಸ್ಥಳೀಯ ಕೇಬಲ್ ಟಿವಿಗಳಲ್ಲಿ ಹೆಚ್ಚು ಹೆಚ್ಚು ಧೈರ್ಯ ತುಂಬುವಂತಹ ಕಾರ್ಯಕ್ರಮಗಳನ್ನು ಮಾಡುವುದರತ್ತ ಗಮನಹರಿಸಬೇಕು ಎಂದು ಸೂಚಿಸಿದರು.

ಹೋಂ ಐಸೋಲೆಷನ್ ನಲ್ಲಿರುವವರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವುದು ಮುಖ್ಯವಾಗಿದೆ. ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಪ್ರತಿನಿತ್ಯ ಅವರ ತಪಾಸಣೆ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್‍ಗಳು ಎಲ್ಲೆಡೆ ಕೆಲಸ ನಿರ್ವಹಿಸುತ್ತಿವೆ. ಕೋವಿಡ್ ಪರೀಕ್ಷೆಗಾಗಿ ಮಾದರಿಗಳನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಸಂಗ್ರಹಿಸುತ್ತಿದ್ದು, ಅಗತ್ಯವಿದ್ದಲ್ಲಿ ಮಾತ್ರ ಬೇರೆಡೆಗೆ ಕಳುಹಿಸಿ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್,  ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಡಾ.ಮೀನಾಕ್ಷಿ, ಡಾ.ರವಿ, ಡಾ.ಕಾಳಪ್ಪ, ಡಾ.ಸುಭಾಷ್‍ಚಂದ್ರ ಇತರರು ಸಭೆಯಲ್ಲಿದ್ದರು.

error: Content is protected !!