ಸಂಕಷ್ಟದಲ್ಲಿ ಬಾರ್ ರೆಸ್ಟೋರೆಂಟ್ ಮಾಲೀಕರು

ಸಂಕಷ್ಟದಲ್ಲಿ ಬಾರ್ ರೆಸ್ಟೋರೆಂಟ್ ಮಾಲೀಕರು - Janathavaniದಾವಣಗೆರೆ, ಆ. 27- ಸರ್ಕಾರ ಬಾರ್ ಓಪನ್ ಮಾಡಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಿದೆ. ಆದರೆ ರೆಸ್ಟೋರೆಂಟ್‌ಗಳು ಇನ್ನೂ ಆರಂಭವಾಗದ ಕಾರಣ ಮಾಲೀಕರು, ಕಾರ್ಮಿಕರು ಇಂದಿಗೂ ಸಂಕಷ್ಟದಲ್ಲಿದ್ದಾರೆ.

ಕಳೆದ ಐದು ತಿಂಗಳಿನಿಂದ ಶೇ. 50ರಷ್ಟು ವ್ಯವಹಾರ ನಷ್ಟವಾಗಿದ್ದು, ರೆಸ್ಟೋರೆಂಟ್‌ನಲ್ಲಿದ್ದ ಕೂಲಿ ಕಾರ್ಮಿಕರಿಗೆ, ಜಾಗಕ್ಕೆ  ಬಾಡಿಗೆ ನೀಡಲು, ವಿದ್ಯುತ್ ಬಿಲ್ ಕಟ್ಟಲು ಇದೀಗ ಮಾಲೀಕರು ಸಾಲಗಾರರ ಮೊರೆ ಹೋಗುವಂತಾಗಿದೆ.

ಜಿಲ್ಲೆಯಲ್ಲಿ 269 ವೈನ್ ಸ್ಟೋರ್‌ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಿವೆ. ನಗರದಲ್ಲಿ 100ಕ್ಕೂ ಹೆಚ್ಚು ಬಾರ್ ಅಂಡ್ ರೆಸ್ಟೋರೆಂಟ್‌ಗಳಿದ್ದು ಇಲ್ಲಿ ಕೆಲಸ ಮಾಡುವ ಸಾವಿರಾರು ಮಂದಿ ಕಾರ್ಮಿಕರಿಗೆ ಇನ್ನೂ ಕೆಲಸವಿಲ್ಲವಾಗಿದೆ. 

ರೆಸ್ಟೋರೆಂಟ್‌ಗಳಲ್ಲಿ ಸಪ್ಲೈ, ಕ್ಲೀನಿಂಗ್  ಮಾಡುವವರು ವೇತನಕ್ಕಿಂತ ಗ್ರಾಹಕರು ಕೊಡುವ ಟಿಪ್ಸ್ ಗಳ ಮೇಲೆಯೇ ಅವಲಂಬಿತರಾಗಿದ್ದರು. ಇನ್ನು ರೆಸ್ಟೋರೆಂಟ್ ಅವಲಂಬಿಸಿರುವ ಮೊಟ್ಟೆ ಮಾರಾಟಗಾರರು, ಚಪಾತಿ, ರೊಟ್ಟಿ ಕೊಡುವವರೂ ಸಹ ರೆಸ್ಟೋರೆಂಟ್ ಆರಂಭಕ್ಕೆ ಕಾತುರರಾಗಿದ್ದಾರೆ.

ಲಾಕ್‌ಡೌನ್‌ ಗೂ ಮುನ್ನ ಜಿಲ್ಲೆಯಲ್ಲಿ ತಿಂಗಳಿಗೆ ಸುಮಾರು 1.40 ಲಕ್ಷ ಬಾಕ್ಸ್ ಮದ್ಯ ಖರೀದಿ ಯಾಗುತ್ತಿತ್ತು. ಆದರೆ ಈಗ ಸುಮಾರು 90 ಸಾವಿರ ಮಾತ್ರ ಖರೀದಿಯಾಗುತ್ತಿದೆ ಎನ್ನಲಾಗುತ್ತಿದೆ. 

ಇಎಲ್ 7 (ಟೂರಿಸಂ ಬಾರ್‌ಗಳು) ಸಾಯಿ, ಪೂಜಾ, ಅಪೂರ್ವ, ಚೇತನಾ, ಮ್ಯಾಂಗೋ, ಜಿನೆಸಿಸ್, ಸದರನ್ ಸ್ಟಾರ್ ಇವುಗಳು ಟೂರಿಸಂ ಲೈಸೆನ್ಸ್ ಪಡೆದಿವೆ.  ಸಿಎಲ್‌-4 ಎಂದರೆ ದಾವಣಗೆರೆ ಕ್ಲಬ್, ಆಫೀಸರ್ಸ್ ಕ್ಲಬ್, ವಿದ್ಯಾಗನರ ಕ್ಲಬ್‌ಗಳು ಒಂದು ವರ್ಷ ಮುಂಗಡವಾಗಿ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಿದೆ. ಈ ಸಲ ಆರು ತಿಂಗಳಿಗೆ ವಿನಾಯಿತಿ ಕೊಟ್ಟಿದ್ದಾರೆ. 

ಬಾರ್‌ಗಳು ತೆರೆಯಲಿ ಬಿಡಲಿ, ನಮ್ಮನ್ನು ನೆಚ್ಚಿಕೊಂಡ ಕೂಲಿ ಕಾರ್ಮಿಕರಿಗಂತೂ ನಾವು ವೇತನ ನೀಡಲೇ ಬೇಕಿದೆ. ಇದು ಕಷ್ಟವಾಗಿದ್ದು, ಸರ್ಕಾರ ಇವರಿಗೆ ಸಹಾಯಧನ ಘೋಷಿಸಬೇಕು ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಈಶ್ವರ್ ಸಿಂಗ್ ಕವಿತಾಳ್ ಒತ್ತಾಯಿಸಿದ್ದಾರೆ.

error: Content is protected !!