ಕೋವಿಡ್ ಸಂಕಷ್ಟದಲ್ಲಿ ಸಮನ್ವಯ ಶಿಕ್ಷಣ ತರಬೇತಿ ಅನಿವಾರ್ಯವೇ ?

ಹೊನ್ನಾಳಿ, ಆ.27- ಕೋವಿಡ್-19 ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯು ಶಿಕ್ಷಕರುಗಳಿಗೆ ಸಮನ್ವಯ ಶಿಕ್ಷಣ ತರಬೇತಿ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಸಾಮಾನ್ಯ ಪ್ರಶ್ನೆಯಾಗಿದೆ.

ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10 ದಿನಗಳ ತರಬೇತಿಯನ್ನು ವಿವಿಧ ಸ್ಥಳಗಳಲ್ಲಿ ತಂಡ ತಂಡಗಳಾಗಿ ತರಬೇತಿ ನೀಡಲು ಮುಂದಾಗಿದ್ದು, ಕೆಲವೆಡೆ ಮುಗಿದರೆ ಕೆಲವೆಡೆ ಇದೀಗ ಆರಂಭಗೊಳ್ಳುತ್ತಿದೆ. ಅದರಂತೆ ಆಗಸ್ಟ್ 24 ರಿಂದ ಸೆಪ್ಟೆಂಬರ್ 2 ರವರೆಗೆ ಹಿರೇಕಲ್ಮಠದ ಬಳಿ 20  ಶಿಕ್ಷಕರನ್ನೊಳಗೊಂಡ ಎರಡು ತಂಡಗಳಿಗೆ ಈ ತರಬೇತಿ ನಡೆಯುತ್ತಿದೆ.

ಇಲಾಖೆಯು ತರಬೇತಿ ನೀಡುವಾಗ ನಾವು ನಿಯಮ ಪಾಲಿಸುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೆ ಈ ತರಬೇತಿಗಳಲ್ಲಿ ಅಂಗಾಂಗಗಳ ನ್ಯೂನತೆ ಇರುವ ವಿಕಲಚೇತನರ ಶಿಕ್ಷಣ ಪ್ರಗತಿಗಾಗಿ ಈ ಸಮನ್ವಯ ಶಿಕ್ಷಣ ತರಬೇತಿ ನೀಡುತ್ತೇವೆ ಎಂಬುದು. ಆದರೆ ಇಂತಹ ವಿದ್ಯಾರ್ಥಿಗಳು ಶೇಕಡಾವಾರು ಎಷ್ಟಿರಬಹುದು? ಆದರೂ ಯಾರೂ ಶಿಕ್ಷಣದಿಂದ  ವಂಚಿತರಾಗ ಬಾರದು ಎಂಬುದು ಅಷ್ಟೇ ಗಮನಾರ್ಹ ವಿಷಯವಾದರೂ, ಅದಕ್ಕಿಂತ ಮುಖ್ಯವಾದದ್ದು ಈ ಸಂಕಷ್ಟ ದಿನಗಳು ಎದುರಾಗಿರುವ ಸಂದರ್ಭದಲ್ಲಿ ಮನೆಗೆ  ಹಾಗೂ ಮನೆತನಕ್ಕೆ ತರಬೇತಿಯಲ್ಲಿ ಭಾಗವಹಿಸುವ ಒಬ್ಬ ಶಿಕ್ಷಕನ ಜೀವನ ಹಾಗೂ ಬದುಕಿನ ಪ್ರಶ್ನೆ ಅಡಕವಾಗಿಲ್ಲವೇ.

ಒಂದನೇ ತರಗತಿ ಮಕ್ಕಳೇ ಆನ್‍ಲೈನ್‍ನಲ್ಲಿ ಶಿಕ್ಷಣ ಪಡೆಯಲು ಮುಂದಾಗುತ್ತಿರುವ ಈ ಆಧುನಿಕ ಕಾಲದಲ್ಲಿ ಶಿಕ್ಷಣವನ್ನೇ ಜೀವನವನ್ನಾಗಿಸಿ ಕೊಂಡ ಶಿಕ್ಷಕರಿಗೆ ಪ್ರತಿವರ್ಷ ಮರುಕಳಿಸುವ ಈ ತರಬೇತಿಯ ವಿಷಯವನ್ನು ತಿಳಿಸಲು ಅವರಿಗೂ  ಆನ್‍ಲೈನ್‍ನಲ್ಲಿ ಶಿಕ್ಷಣ ನೀಡಿದರೆ ಅರ್ಥವಾಗುವುದಿಲ್ಲವೇ? ಶಿಕ್ಷಣ ಇಲಾಖೆಯೇ  ನಿರ್ದೇಶನ ಮಾಡಿದ ಅಧ್ಯಯದ ಪುಸ್ತಕಗಳು ಈ ಸಂದರ್ಭದಲ್ಲಿ ಪರಿಹಾರವನ್ನು ನೀಡಬಹುದಲ್ಲಾ.

ಇಂತಹ ತರಬೇತಿಗಳಲ್ಲಿ ಭಾಗವಹಿಸಿದ ಶಿಕ್ಷಕರೇ ಮುಂದೆ ‘ವಿದ್ಯಾಗಮ’  ಎಂಬ ಹೆಸರಿನಲ್ಲಿ ಮನೆ ಮನೆಗೆ   ಭೇಟಿ ನೀಡಬಹುದು.   ಈ ಎಲ್ಲಾ ಪ್ರಶ್ನೆಗಳು ಎದುರಿರುವಾಗ ಜೀವಕ್ಕಿಂತ ದೊಡ್ಡದು ಯಾವುದಿದೆ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ. ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು  ಸಮಾಜಕ್ಕೆ ಅತ್ಯಮೂಲ್ಯವಾದ  ಕೊಡುಗೆ ನೀಡುವ ಶಿಕ್ಷಕರ   ಜೀವನದ ಬಗ್ಗೆ ಚಿಂತನೆ ನಡೆಸಬೇಕಿದೆ.

ಶಾಲೆಗಳ ಆರಂಭವೇ ದಿನದಿಂದ ದಿನಕ್ಕೆ ಮುಂದೆ ಹೋಗುತ್ತಿರುವಾಗ ಇಂತಹ   ಅನೇಕ  ತರಬೇತಿಗಳ ಹೆಸರಿನ ಈ ಸಭೆಗಳ ಅವಶ್ಯಕತೆ ಇದೆಯೇ?


ಮೃತ್ಯುಂಜಯ ಪಾಟೀಲ್

error: Content is protected !!