ದಾವಣಗೆರೆ, ಆ.21- ವೈವಾಹಿಕ ಜೀವನದ ಸಮಸ್ಯೆಗೆ ಪರಿಹಾರ ನೀಡಿದ್ದರಿಂದ ಗಿಫ್ಟ್ ರೂಪದಲ್ಲಿ ಹಣ ಕಳಿಸಿರುವುದಾಗಿ ನಂಬಿಸಿ ಆನ್ ಲೈನ್ ಮುಖೇನ ಸುಮಾರು 9 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿರುವುದಾಗಿ ಜ್ಯೋತಿಷಿಯೂ ಆಗಿರುವ ಅಂಚೆ ನೌಕರ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಮೆರಿಕಾ ಮೂಲದ ಮಹಿಳೆ ಸೇರಿ ಐವರ ವಿರುದ್ಧ ದೂರು ದಾಖಲಿಸಿದ್ದಾರೆ.
ಜಗಳೂರು ತಾಲ್ಲೂಕು ಗಡಿಮಾಕುಂಟೆಯ ಬಿ.ಎಮ್. ವಿರುಪಾಕ್ಷಯ್ಯ ವಂಚನೆಗೊಳಗಾದ ಪೋಸ್ಟ್ ಮ್ಯಾನ್.
ದಾವಣಗೆರೆ ತಾಲ್ಲೂಕು ಅಣಜಿ ಗ್ರಾಮದಲ್ಲಿ ಗುತ್ತಿಗೆ ಅಧಾರದ ಮೇಲೆ ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದ್ದು, ಜ್ಯೋತಿಷಿ ಕುಟುಂಬವಾದ್ದರಿಂದ ಫೇಸ್ ಬುಕ್ ನಲ್ಲಿ ಜ್ಯೋತಿಷ್ಯದ ಗ್ರೂಪ್ ವೊಂದರಲ್ಲಿ ಸೇರಿದ್ದು, ಅದರಲ್ಲಿ ಅಮೆರಿಕಾದ ಕ್ಯಾಲಿಪೋರ್ನಿಯಾದ ರಾಕೆಲ್ ಡಿನಿಜ್ ಎಂಬ ಮಹಿಳೆ ತಮ್ಮ ವೈವಾಹಿಕ ಜೀವನದಲ್ಲಿ ಡೈವರ್ಸ್ ಸಮಸ್ಯೆ ಪರಿಹಾರದ ಬಗ್ಗೆ ಯಾರು ಸರಿಯಾದ ಪರಿಹಾರ ನೀಡುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದರು. ಆಗ ನಾನು ಸಮಸ್ಯೆಗೆ ಪರಿಹಾರದ ಬಗ್ಗೆ ಸಲಹೆ ನೀಡಿದ್ದೆ. ಪುನಃ ಆ ಮಹಿಳೆಯು ಪೋಸ್ಟ್ ಮಾಡಿ ತನ್ನ ವೈವಾಹಿಕ ಜೀವನದಲ್ಲಿ ಡೈವರ್ಸ್ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿರುವುದಾಗಿ ಬರೆದು ಒಳ್ಳೆಯದಾಗಿದ್ದರಿಂದ ಕಾಣಿಕೆಯಾಗಿ 20 ಸಾವಿರ ಡಾಲರ್ ಹಣವನ್ನು ನಿಮ್ಮ ಖಾತೆಗೆ ಕಳುಹಿಸುವುದಾಗಿ ಹೇಳಿ ಖಾತೆ ನಂಬರ್ ಹಾಗೂ ಬ್ಯಾಂಕಿನ ವಿವರ ನೀಡಲು ಕೇಳಿದಾಗ, ಖಾತೆಯುಳ್ಳ ಬ್ಯಾಂಕಿನ ಮಾಹಿತಿ ಕಳುಹಿಸಿದೆ. ನಂತರ ಆ ಮಹಿಳೆಯು ಹಣವನ್ನು ಖಾತೆಗೆ ಜಮಾ ಮಾಡಿರುವುದಾಗಿ ತಿಳಿಸಿದ್ದರು.
ಸ್ವಲ್ಪ ಸಮಯದ ನಂತರ ಅಪರಿಚಿತ ಮಹಿಳೆ ದೂರವಾಣಿ ಮುಖೇನ ಸಂಪರ್ಕಿಸಿ ನವದೆಹಲಿಯ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ಸಿಬ್ಬಂದಿ ಎಂದು ಪರಿಚಿತಳಾಗಿ ನಿಮಗೆ ಪರಿಚಯವಿರುವ ರಾಕೆಲ್ ಡಿನಿಜ್ ಎಂಬ ಮಹಿಳೆಯು ನಿಮ್ಮ ಹೆಸರಿಗೆ 20 ಸಾವಿರ ಡಾಲರ್ ಹಣ ಕಳುಹಿಸಿರುವುದಾಗಿ ಹೇಳಿ ನಿಮ್ಮ ಹೆಸರಿಗೆ ಖಾತೆ ತೆರಯಬೇಕೆಂದು ನಂಬಿಸಿ ಖಾತೆಗೆ ಡೆಪಾಜಿಟ್ ರೂಪದಲ್ಲಿ ಹಣ ಜಮಾ ಮಾಡಬೇಕೆಂದು ಹಂತ ಹಂತವಾಗಿ ಸುಮಾರು 9 ಲಕ್ಷದ 20 ಸಾವಿರದಷ್ಟು ಹಣವನ್ನು ಆನ್ ಲೈನ್ ಮೂಲಕ ವಂಚಿಸಿರುವುದಾಗಿ ವಿರುಪಾಕ್ಷಯ್ಯ ದೂರಿದ್ದಾರೆ.