ಬಸವಾದಿ ಶಿವಶರಣರ ಚಳವಳಿ ನಿಂತಿರುವುದೇ ಕಾಯಕ ತತ್ವದ ಮೇಲೆ

ಬಸವಾದಿ ಶಿವಶರಣರ ಚಳವಳಿ ನಿಂತಿರುವುದೇ ಕಾಯಕ ತತ್ವದ ಮೇಲೆ - Janathavaniಸಾಣೇಹಳ್ಳಿ, ಆ.4-ಬಸವಾದಿ ಶಿವಶರಣರ ಚಳವಳಿ ನಿಂತಿರುವುದೇ ಕಾಯಕ ತತ್ವದ ಮೇಲೆ. ಶುದ್ಧ ಬದುಕಿನ ಸಾರಸರ್ವಸ್ವ ಕಾಯಕ. ಕಾಯಕವೇ ಶರಣರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಆಧಾರ ಸ್ತಂಭ. ಕಾಯಕವೇ ಶರಣರ ಚಳವಳಿಗೆ ಶಕ್ತಿ. ಆ ಶಕ್ತಿಯನ್ನು ತುಂಬಿದವರು ತಳಸಮುದಾಯದ ಕುಶಲಕರ್ಮಿಗಳು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.

ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಸ್ಥಾನ-ಮಾನದಲ್ಲಿದ್ದರೂ ತನ್ನ ಜೀವನ ನಿರ್ವಹಣೆಗೆ ಕಾಯಕ ಮಾಡಲೇಬೇಕು. ಹಾಗೆಂದು ದುರ್ಮಾರ್ಗದಿಂದ  ಯಾರಿಗೋ ಮೋಸ ಮಾಡಿ, ತೊಂದರೆ ಕೊಟ್ಟು ಸಂಪಾದನೆ ಮಾಡುವ ವೃತ್ತಿಗಳು ಕಾಯಕವಾಗುವುದಿಲ್ಲ ಎಂದರು. ಕಾಯಕ ಶಬ್ದ ಕೇಳುತ್ತಲೇ ನಮಗೆ ನೆನಪಾಗುವ ಹೆಸರು ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ, ಮೋಳಿಗೆಯ ಮಾರಯ್ಯ, ಮಾದಾರ ಧೂಳಯ್ಯ, ಕಸ ಹೊಡೆಯುವ ಸತ್ಯಕ್ಕ ಮುಂತಾದವರು. ಕಾಯಕವೇ ಶರಣರ ಬದುಕಿನ ಉಸಿರು. ಗುರು, ಲಿಂಗ, ಜಂಗಮರಿಗೂ ಕಾಯಕ ಕಡ್ಡಾಯ. ಶರಣರ ದೃಷ್ಟಿಯಲ್ಲಿ ಪೂಜೆಗಿಂತಲೂ ಶ್ರೇಷ್ಠವಾದುದು ಕಾಯಕ. ಹಾಗಾಗಿ ಆಯ್ದಕ್ಕಿ ಮಾರಯ್ಯನವರು `ಕಾಯಕವೆ ಕೈಲಾಸ’ ಎನ್ನುವರು. ಕಾಯಕ ಮಾಡಲು ಕಾಯ ಎಂದರೆ ಶರೀರ ಬೇಕು. ಅದಕ್ಕಾಗಿ ಬಸವಣ್ಣನವರು `ಕಾಯಕವೇ ಕೈಲಾಸ’ ಎಂದಿದ್ದಾರೆ. ಕಾಯಕ ವ್ಯಕ್ತಿಯ ಮತ್ತು ಸಮಾಜದ ಪ್ರಗತಿಯ ಸಂಕೇತ. ಜಾತ್ಯತೀತ ನಿಲವಿನ ಧ್ಯೋತಕ ಎಂದರು. 

ಶರಣರು ಕಾಯಕ ಚಳವಳಿಯ ಮೂಲಕ ಒತ್ತು ಕೊಟ್ಟದ್ದು ಇಷ್ಟಲಿಂಗ ಪೂಜೆಗೆ. ಕಾರಣ ಅಂದು ದೇವಾಲಯಗಳು ಸಹ ಸುಲಿಗೆಯ ಕೇಂದ್ರಗಳಾಗಿದ್ದುದು. ಲಿಂಗಾಂಗ ಸಮರಸ ಸುಖ ಕೇವಲ ಇಷ್ಟಲಿಂಗ ಪೂಜೆಯಿಂದ ದೊರೆಯುವುದಿಲ್ಲ. ಅದಕ್ಕೆ ತಳಹದಿ ಕಾಯಕ. ಕಾಯಕ್ಕೆ ಮಹತ್ವ ಬರುವುದು ಕಾಯಕ ಮತ್ತು ಅದರಿಂದ ಬಂದ ಆದಾಯವನ್ನು ಬಳಸುವ ವಿಧಾನದಿಂದ. ಪ್ರತಿಯೊಬ್ಬರಲ್ಲೂ ಕಾಯಕ ಶ್ರದ್ಧೆ ಬಲಗೊಂಡರೆ ಬಡತನಕ್ಕೆ ಇಂಬಿರುವುದಿಲ್ಲ. ಭಿಕ್ಷೆಗೆ ಅವಕಾಶವಿರುವುದಿಲ್ಲ. ಸೋಮಾರಿತನ ಇರುವುದಿಲ್ಲ. ಅಷ್ಟೇ ಅಲ್ಲ. ಕಾಯಕ ಪ್ರಜ್ಞೆಯುಳ್ಳವರು ದಾಸೋಹ ತತ್ವವನ್ನು ಪರಿಪಾಲಿಸಬೇಕು. ಕಾಯಕದಿಂದ ಪಡೆದಿದ್ದನ್ನು ಹಿತ-ಮಿತವಾಗಿ ಬಳಸಬೇಕು. ಮಿಕ್ಕುಳಿದದ್ದನ್ನು ಕೂಡಿಡದೆ ಗುರು-ಲಿಂಗ-ಜಂಗಮದ ಒಳಿತಿಗೆ ಎಂದರೆ ಸಮಾಜದ ಪ್ರಗತಿಗೆ ಕೊಡಬೇಕು. ಅದೇ ದಾಸೋಹ ತತ್ವ ಎಂದರು.

`ಕಾಯಕ ಜೀವಿಗಳ ಚಳವಳಿ’ ಕುರಿತಂತೆ ನಿವೃತ್ತ ಪ್ರಾಧ್ಯಾಪಕ ಡಾ. ಸಿ ವೀರಣ್ಣ ಮಾತನಾಡಿ 12 ನೆಯ ಶತಮಾನದ ಕಾಯಕ ಜೀವಿಗಳ ಚಳವಳಿ ಇಂದಿಗೂ ಮೊಗೆದಷ್ಟೂ ಹೊಸ ಹೊಸ ಹೊಳಹುಗಳನ್ನು ನೀಡುತ್ತದೆ. ಅದೊಂದು ಕೇವಲ ಧಾರ್ಮಿಕ ಚಳವಳಿಯಲ್ಲ. ಸಾಮಾಜಿಕ, ಆರ್ಥಿಕ ವಿಚಾರಗಳೂ ಅದರಲ್ಲಿ ಅಡಗಿವೆ. ವಚನಕಾರರೆಲ್ಲರೂ ಕಾರ್ಮಿಕ ಹಿನ್ನೆಲೆಯಿಂದ ಬಂದವರು. ವೈದಿಕ ಪರಂಪರೆಯನ್ನು ಅನುಸರಿಸುತ್ತಿದ್ದ ದೇವಸ್ಥಾನಗಳು ಮತ್ತು ಶೈವ ಮಠಗಳು ಶೋಷಣೆಯ ಕೇಂದ್ರಗಳಾಗಿದ್ದವು. ಈ ಎಲ್ಲ ಶೋಷಣೆಗಳ ವಿರುದ್ಧದ ಅಸ್ತ್ರವಾಗಿ ಶರಣರು ದೇವಾಲಯವನ್ನು ವಿರೋಧಿಸಿ, ದೇಹವನ್ನೇ ದೇವಾಲಯವನ್ನಾಗಿಸಿಕೊಂಡರು ಎಂದರು.

ವಚನ ಚಳುವಳಿಯಲ್ಲಿ ಇರಬಹುದಾದ ಮಾತುಗಳೆಲ್ಲ ಆದ್ಯ ವಚನಕಾರ ದಾಸಿಮಯ್ಯನವರ ವಚನಗಳಲ್ಲಿವೆ. ಅಂದರೆ ಬಸವಣ್ಣನವರಿಗಿಂತ ಮುಂಚಿನಿಂದಲೇ ಚಳವಳಿಗೆ ಬೇಕಾದ ಅಂಶಗಳು ವಚನಕಾರರಲ್ಲಿ ಅಡಕವಾಗಿದ್ದವು. ವಚನ ಚಳುವಳಿಗೆ ಬಸವಣ್ಣ ಪ್ರವೇಶ ಮಾಡಿದ್ದು; ಆತ ಹುಟ್ಟಿನಂದಿನಿಂದಲೇ ಹೋರಾಟಗಾರನಾಗಿದ್ದದ್ದು ಮತ್ತು ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದ ಬಸವಣ್ಣನ ಬಳಿ ಕಾಯಕ ಜೀವಿಗಳು ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದದ್ದು ಹಾಗೂ ದೇವಾಲಯ ಮತ್ತು ಮಠಗಳಲ್ಲಿ ಆಗುತ್ತಿದ್ದ ಶೋಷಣೆಯನ್ನು ಗಮನಿಸಿ. ಬಸವಣ್ಣನವರು ಯಾವಾಗಿನಿಂದ ವಚನಗಳನ್ನು ಬರೆಯಲು ಶುರು ಮಾಡಿದರು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. 

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್.ಎಸ್. ನಾಗರಾಜ್,  ತಬಲಾ ಸಾಥಿ ಶರಣ ಕುಮಾರ್ ವಚನ ಗೀತೆಗಳನ್ನು ಹಾಡಿದರು. ಅಧ್ಯಾಪಕ ಟಿ.ಎಂ. ಮರುಳಸಿದ್ಧಯ್ಯ ಸ್ವಾಗತಿಸಿದರು. ಕಲ್ಯಾಣ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವಾಟ್ಸಾಪ್ ಮೂಲಕ ಕೇಳಿದ ಹಲವು ಪ್ರಶ್ನೆಗಳಿಗೆ ಪಂಡಿತಾರಾಧ್ಯ ಶ್ರೀಗಳು ಉತ್ತರಿಸಿದರು. ಶಿವಮೊಗ್ಗದ ಅಡಿಕೆ ವ್ಯಾಪಾರಿ ಓಂಕಾರಪ್ಪ ಕಾರ್ಯಕ್ರಮದ ದಾಸೋಹಿಗಳಾಗಿದ್ದರು. ದೇಶ-ವಿದೇಶದ ನೂರಾರು ಜನ ಅಂತರ್ಜಾಲಿಗರು ಕಾರ್ಯಕ್ರಮವನ್ನು ವೀಕ್ಷಿಸಿದರು. 

error: Content is protected !!