ಸಾಣೇಹಳ್ಳಿ, ಆ.17- `ರಗಳೆ’ಯ ಕವಿಯೆಂದೇ ಖ್ಯಾತನಾದ ಹರಿಹರ ಒಬ್ಬ ಸ್ವತಂತ್ರ್ಯ ಪ್ರವೃತ್ತಿಯ, ಬಂಡಾಯ ಮನೋಧರ್ಮದ ಕವಿಯಾಗಿದ್ದು, ಯಾರ ಅಧೀನದಲ್ಲೂ ಬದುಕುವ ಸ್ವಭಾವ ಅವನದಾಗಿರಲಿಲ್ಲ. ಬಂಡಾಯ ಮತ್ತು ಕ್ರಾಂತಿಕಾರಕ ಧೋರಣೆಗೆ ಹರಿಹರ ಕವಿಯ ಮನೋಧರ್ಮವೇ ಕಾರಣವಾಗಿತ್ತು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟರು.
ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಈ ದಿನದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಆತನ ಮನೋಧರ್ಮದ ಜೊತೆಗೆ ತಮಿಳು ನಾಡಿನ ಶೆಕ್ಕಿಯಾರ್ ಕವಿಯ `ಪೆರಿಯ ಪುರಾಣ’ ಹಾಗೂ12ನೇ ಶತಮಾನದ ವಚನ ಚಳವಳಿಯ ಪ್ರಗತಿಪರ ಮೌಲ್ಯಗಳು ಪ್ರೇರಕ ಎನ್ನಲಾಗುತ್ತದೆ. ಪೂರ್ವದಲ್ಲಿ ಕವಿಗಳು ದೇವಾನುದೇವತೆಗಳನ್ನು, ರಾಜ-ಮಹಾರಾಜರನ್ನು, ರಾಮ-ಕೃಷ್ಣರಂಥ ಪುರಾಣ ಪುರುಷರನ್ನು ತಮ್ಮ ಕಾವ್ಯದ ನಾಯಕರನ್ನಾಗಿ ಮಾಡಿಕೊಂಡದ್ದುಂಟು. ವಚನಕಾರರು ಶೋಷಿತ ವರ್ಗದ ಪರವಾಗಿ ಧ್ವನಿ ಎತ್ತಿದರು. ಕಾಯಕ ಜೀವಿಗಳನ್ನೇ ಅನುಭಾವಿಗಳನ್ನಾಗಿ ಮಾಡಿದರು. ಇಂಥ ಜೀವಪರ ಕಾಳಜಿ ಹರಿಹರ ಕವಿಯ ಮೇಲೆ ಪ್ರಭಾವ ಬೀರಿದ ಕಾರಣದಿಂದ ಅವರು ಸಹ ತಮ್ಮ ಕಾವ್ಯದ ನಾಯಕರನ್ನಾಗಿ ತಳಸಮುದಾಯದ ಶಿವಭಕ್ತರನ್ನು ಆಯ್ಕೆ ಮಾಡಿಕೊಂಡರು ಎಂದರು.
ಹರಿಹರ ತಮ್ಮ ಬದುಕು ಮತ್ತು ಕಾವ್ಯ ಎರಡರಲ್ಲೂ ಬಂಡಾಯ ಪ್ರಜ್ಞೆ ಮತ್ತು ದಲಿತ ಪ್ರಜ್ಞೆಯನ್ನು ಮೆರೆದಿರುವುದನ್ನು ಅವರ ಕಾವ್ಯಗಳ ಮೂಲಕ ಗುರುತಿಸಬಹುದು. 12ನೆಯ ಶತಮಾನದ ಬಸವಾದಿ ಶಿವಶರಣರ ಸಾಮೂಹಿಕ ಸಮಾಜೋ ಧಾರ್ಮಿಕ ಚಳವಳಿಯ ಪ್ರಭಾವವನ್ನು ಅರಗಿಸಿಕೊಳ್ಳಲು ಅಂದಿನ ವೈದಿಕ ಪರಂಪರೆಯವರಿಗೆ, ಪಟ್ಟಭದ್ರಹಿತಾಸಕ್ತರಿಗೆ ಆಗಲಿಲ್ಲ. ಹಾಗಾಗಿ ಅವರ ಉಪಟಳದಿಂದ ಕಲ್ಯಾಣದಲ್ಲಿ ರಕ್ತಕ್ರಾಂತಿಯಾಯ್ತು. ಶರಣರು ಕಲ್ಯಾಣ ಬಿಟ್ಟು ಎತ್ತೆತ್ತಲೋ ಚದುರಿ ಹೋಗುವ ಪರಿಸ್ಥಿತಿ ಬಂತು. ಇಂಥ ಚಳವಳಿಯ ಪ್ರಭಾವ ಮತ್ತು ಪರಿಣಾಮವನ್ನು ಹತ್ತಿರದಿಂದ ಕಂಡಿದ್ದ ಹರಿಹರ ನಾಳೆ ತನಗೂ ಇಂಥ ಗತಿ ಬಂದೀತೆಂದು ಹೆದರಲಿಲ್ಲ.
ಪಟ್ಟಭದ್ರರ ಕುಚೇಷ್ಠೆ, ಕುತಂತ್ರಗಳಿಗೆ ಮಣಿಯಲಿಲ್ಲ. ಅಂಜದೆ, ಅಳುಕದೆ ನಿರ್ಭೀತರಾಗಿ ಹೊಸ ಕಾವ್ಯ ಪರಂಪರೆಗೆ ನಾಂದಿ ಹಾಡಿದರು. ಬಸವಾದಿ ಶರಣರಂತೆ ಸಾಮಾಜಿಕ ಹೋರಾಟಕ್ಕೆ ಹರಿಹರ ಧುಮುಕದಿದ್ದರೂ ಯಾರ ಜೊತೆಗೂ ರಾಜಿ ಮಾಡಿಕೊಂಡದ್ದು ಕಂಡುಬರುವುದಿಲ್ಲ. ಬಸವಣ್ಣನವರಂತೆ ಬದುಕಿ ಅವರ ಆಲೋಚನೆಗಳನ್ನೇ ಮೈಗೂಡಿಸಿಕೊಂಡವರು ಹರಿಹರ ಕವಿ. ಅವರ ಕಾವ್ಯಗಳನ್ನು ಓದಿದರೆ ಅವರ ಬದುಕು, ಬರಹ ಒಂದೇ ಆಗಿರುವುದನ್ನು ಗುರುತಿಸಬಹುದು. ಮಾನವೀಯ ಗುಣಗಳಿಗೆ, ತಾವು ನಂಬಿದ ತತ್ವಸಿದ್ಧಾಂತಗಳಿಗೆ ಅಪಚಾರವಾಗುವಂತಿದ್ದರೆ ಅವರು ಅಲ್ಲಿಂದ ದೂರ ಸರಿಯುತ್ತಿದ್ದರು ಎನ್ನುವುದಕ್ಕೆ ದ್ವಾರಸಮುದ್ರದಿಂದ ಪಂಪಾಕ್ಷೇತ್ರಕ್ಕೆ ಬಂದುದೇ ಸಾಕ್ಷಿಯಾಗಿದೆ ಎಂದರು.
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರತಿವರ್ಷ ತಪ್ಪದೆ ಹರಿಹರ ಮಹಾಕವಿಯ ಜಯಂತಿಯನ್ನು ಆಚರಿಸುತ್ತಿದ್ದರು. ಅವರಿಗೆ ಹರಿಹರ ಎಂದರೆ ಅಪಾರ ಗೌರವ. ಹಾಗಾಗಿ 1973ರಲ್ಲಿ ಹರಿಹರದಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಮಹಾಮಂಟಪಕ್ಕೆ `ಮಹಾಕವಿ ಹರೀಶ್ವರ’ ಎಂದೇ ನಾಮಕರಣ ಮಾಡಿದ್ದರು ಎಂದು ಸ್ಮರಿಸಿದರು.
ಹರಿಹರ ಸ್ಥಾವರ ಲಿಂಗದ ಆರಾಧಕರಾಗಿದ್ದರು ಎನ್ನುವ ಆಪಾದನೆ ಇದೆ. ಅವರು ವಚನ ಚಳವಳಿಯಿಂದ ಪ್ರಭಾವಿತವಾಗಿದ್ದರೆ ಇಷ್ಟಲಿಂಗವನ್ನು ಪೂಜಿಸಬೇಕಿತ್ತು ಎನ್ನುವ ಪ್ರಶ್ನೆಯನ್ನೂ ಮಾಡುವರು. ಹರಿಹರ ಯಾವ ಕಾವ್ಯಗಳಲ್ಲೂ ಇಷ್ಟಲಿಂಗದ ಪ್ರಸ್ತಾಪ ಮಾಡಿದಂತೆ ಕಾಣುವುದಿಲ್ಲ. ಆಧ್ಯಾತ್ಮದ ತುಟ್ಟತುದಿ ತಲುಪಿದವರ ಪ್ರಸ್ತಾಪ ಬಂದರೆ ಮೊದಲು ಬರುವ ಹೆಸರೇ ಅಲ್ಲಮನದು. ಅಂಥ ಅನುಭಾವಿಯ ಬಗ್ಗೆ ಕಾವ್ಯ ಬರೆದಿರುವುದು ಹರಿಹರ ಕವಿಯ ಹೆಗ್ಗಳಿಕೆ. ಒಟ್ಟಾರೆ ದಮನಿತರು, ಶೋಷಿತರು, ಕಾಯಕಜೀವಿಗಳೆಲ್ಲರೂ ಹರಿಹರ ಕವಿಯ ದೃಷ್ಟಿಯಲ್ಲಿ ದಲಿತರೇ. ಅವತ್ತು ದಲಿತಪ್ರಜ್ಞೆ ಇತ್ತು; ದಲಿತ ಪದ ಇರಲಿಲ್ಲ. ಪಂಚಮರು, ಶೂದ್ರರು ಎನ್ನುವ ಪದ ಬಳಕೆ ಇತ್ತು. ಚಾತುರ್ವರ್ಣಗಳಲ್ಲಿ ಕೊನೆಗೆ ಬರುವವರೆಲ್ಲರೂ ಶೂದ್ರರು. ಆ ವರ್ಗಕ್ಕೆ ಆ ಕಾಲದಲ್ಲಿ ಮಹಿಳೆಯರನ್ನೂ ಸೇರಿಸಲಾಗಿತ್ತು. ಹರಿಹರ ಅಂಥ ಮಹಿಳೆಯರನ್ನೂ ತಮ್ಮ ಕಾವ್ಯದ ನಾಯಕಿಯರನ್ನಾಗಿ ಮಾಡಿಕೊಂಡಿರುವುದು ಗಮನಾರ್ಹ.
ಹರಿಹರನ ದಲಿತ ಪ್ರಜ್ಞೆ ಕುರಿತಂತೆ ಚಿಂತಕ ಮೈಸೂರಿನ ಡಾ. ಅರವಿಂದ ಮಾಲಗತ್ತಿ ಮಾತನಾಡಿ, ಹರಿಹರ ಜನಮಾನಸದ, ದೇಸಿಯ ಶಕ್ತ ಸ್ವಾಭಿಮಾನದ ಕವಿ. ಜನಸಮುದಾಯದಲ್ಲಿ ಇದ್ದ ಕಥಾನಕಗಳನ್ನು ತನ್ನ ಶ್ರೀರಕ್ಷೆಯಲ್ಲಿ ರಗಳೆಗಳ ಮೂಲಕ ರೂಪಿಸಿದ್ದಾನೆ. ರಗಳೆಗೆ ರಾಜ ಮಾರ್ಗವನ್ನು ತೋರಿದ ಕವಿ. ದೊರೆಯ ಚರಿತೆಗಳು ಭವಿ ಚರಿತೆಗಳೆಂದು ಅವುಗಳನ್ನು ದೂರಿಟ್ಟು, ಶಿವಭಕ್ತರನ್ನು ತಲೆಯ ಮೇಲೆ ಹೊತ್ತು ಈತನ ಕೃತಿಗಳು ಮೆರೆಯುತ್ತವೆ. ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನನ್ನಾಗಿ, ಅಸಾಮಾನ್ಯನನ್ನು ಸಾಮಾನ್ಯನನ್ನಾಗಿ ರಗಳೆಗಳಲ್ಲಿ ಚಿತ್ರಿಸಿದ್ದಾನೆ. ಈತನ ರಗಳೆಗಳಲ್ಲಿ ತಳ ಸಮುದಾಯದ ಕಥಾನಾಯಕರೇ ಹೆಚ್ಚು.
ಈತನ ವೃತ್ತಿ ಮತ್ತು ಶಿವಭಕ್ತಿ ಅಭೇದ್ಯ. ಶೂದ್ರೋದ್ಧಾರದ ಆದ್ಯ ಕವಿ. ಮೂಲತಃ ಸೈದ್ಧಾಂತಿಕ ಕವಿಯಾದ ಹರಿಹರನಿಗೆ ಕನ್ನಡ ಚರಿತ್ರೆಯಲ್ಲಿ ಸಿಗಬೇಕಾಗಿದ್ದ ಸ್ಥಾನಮಾನಗಳು ಸಿಗಲಿಲ್ಲ. ಚರಿತ್ರೆಗಿಂತ ಸಮಾಜದ ಶುದ್ಧೀಕರಣ ಮುಖ್ಯ ಎಂದರಿತಿದ್ದ ಹರಿಹರ, ಸಮಾಜದ ಶುದ್ಧೀಕರಣದಲ್ಲಿ ಶರಣರ ಪಾತ್ರ ಮುಖ್ಯವಾದುದು ಎಂದು ಅರಿತಿದ್ದನು. ಈತ ಬಳಸಿದ ಪವಾಡದ ಪರಿಭಾಷೆಯಿಂದಾಗಿ ಈತನಿಗೆ ಐತಿಹಾಸಕ ತಿಳಿವಳಿಕೆ ಇಲ್ಲ ಎನ್ನುವ ಅಭಿಪ್ರಾಯ ತಳೆಯಲಾಗಿದೆ. ಆದರೆ ತಳಸಮುದಾಯದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ನೋಡಿದಾಗ ಪರಿಣಾಮ ಭಿನ್ನವಾಗಿಯೇ ಮೂಡಿಬರುತ್ತೆ ಎಂದರು.
ಮಹಾಪುರುಷರ ನಡೆಗಳು ಜನಸಾಮಾನ್ಯರಿಗೆ ಅಸಾಮಾನ್ಯವಾಗಿ ಕಾಣುತ್ತವೆ. ಆಗ ಅವು ಪವಾಡದ ರೂಪವನ್ನು ಧಾರಣ ಮಾಡುತ್ತವೆ. ಒಂದು ಕಾಲಘಟ್ಟದ ಸಂದರ್ಭದಲ್ಲಿ ಪವಾಡಗಳು ಅನಿವಾರ್ಯ ಮತ್ತು ಅಗತ್ಯ. ಒಬ್ಬ ಕವಿಯ ನಿರೂಪಣಾ ವಿಧಾನ ಹೀಗೆಯೇ ಇರಬೇಕೆಂದು ಅಪೇಕ್ಷಿಸುವುದು ತಪ್ಪು. ಪವಾಡಗಳಲ್ಲಿ ಮೂರು ರೀತಿ; ಇತ್ಯಾತ್ಮಕ ಪವಾಡಗಳು – ಚಳವಳಿಗೆ ಪೂರಕವಾಗಿ ಕೆಲಸ ಮಾಡುವಂಥವು. ನೇತ್ಯಾತ್ಮಕ ಪವಾಡಗಳು – ತಾತ್ವಿಕತೆಯನ್ನು ಪ್ರತಿಬಿಂಬಿಸುವುದರಲ್ಲಿ ಸೋಲುವ ಗುಣಗಳನ್ನು ಹೊಂದಿರುತ್ತವೆ. ದ್ವಂದ್ವಾತ್ಮಕ ಪವಾಡಗಳು – ಅಭಿಪ್ರಾಯಗಳನ್ನು ಭಿನ್ನ ವ್ಯಾಖ್ಯಾನಗಳಿಗೆ ಆಸ್ಪದ ಮಾಡಿಕೊಡುತ್ತವೆ. ಈ ಮೂರೂ ಸ್ವರೂಪದ ಪವಾಡಗಳು ಹರಿಹರನ ರಗಳೆಗಳಲ್ಲಿ ಕಾಣಬಹುದು. ಹೆಚ್ಚಿನ ಪವಾಡಗಳು ಇತ್ಯಾತ್ಮಕವಾಗಿ ಇವೆ. ಶರಣರ ಆಶಯಗಳನ್ನು ಪವಾಡಗಳಲ್ಲಿ ಸಮರ್ಥವಾಗಿ ಬಿಂಬಿಸಲಾಗಿದೆ, ಪೂರಕವಾಗಿ ಶ್ರಮಿಸಿವೆ ಎಂದು ಹೇಳುವುದು ಅನಿವಾರ್ಯ. ಪವಾಡಗಳು ಚರಿತ್ರೆಯನ್ನು ಸಡಿಲಗೊಳಿಸಿವೆ ಎನ್ನುವುದಕ್ಕೆ ಬದಲಾಗಿ ಚರಿತ್ರೆಯ ಆಶಯಗಳನ್ನು ದೃಢೀಕರಿಸಿವೆ ಅನ್ನವುದು ಹೆಚ್ಚು ಸರಿ.
ಆರಂಭದಲ್ಲಿ ಶಿವಸಂಚಾರ ಕಲಾವಿದರಾದ ಕೆ. ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್.ಎಸ್. ನಾಗರಾಜ್, ತಬಲ ಸಾಥಿ ಶರಣ್ ಕುಮಾರ್ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು. ಸಿದ್ದಾಪುರದ ವಿ.ಎಸ್. ಯೋಗರಾಜ್ ಸ್ವಾಗತಿಸಿದರು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಹಿರೇಕೋಗಲೂರಿನ ಬಸವರಾಜು ಮತ್ತು ಶಿವಗಂಗಾ ದಂಪತಿಗಳು ಇಂದಿನ ಕಾರ್ಯಕ್ರಮದ ದಾಸೋಹಿಗಳಾಗಿದ್ದರು.