ಷರತ್ತುಗಳಡಿ ಗಣೇಶ ಹಬ್ಬದ ಆಚರಣೆ

ದಾವಣಗೆರೆ ಆ.19- ಜಿಲ್ಲೆಯಾದ್ಯಂತ ಗಣೇಶ ಹಬ್ಬದ ಆಚರಣೆಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. 

ಗಣೇಶ ಚತುರ್ಥಿ ಹಬ್ಬದಲ್ಲಿ ಸರಳ ರೀತಿಯಲ್ಲಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶ ಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಟಾಪಿಸುವುದು. ಪಾರಂಪರಿಕ ಗಣೇಶೋತ್ಸವಕ್ಕಾಗಿ ಗಣೇಶೋತ್ಸವ ಸಮಿತಿಗಳು, ಮಂಡಳಿಗಳು, ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಮುನ್ಸಿಪಲ್ ಕಾರ್ಪೋರೇಷನ್, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯತಕ್ಕದು. 

ಒಂದು ವಾರ್ಡಿಗೆ, ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು ಮಾತ್ರ ಆಚರಿಸಲು ಪ್ರೋತ್ಸಾಹಿಸುವುದು. ಇಂತಹ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು, ಒಮ್ಮೆಲೆ 20ಕ್ಕಿಂತ ಹೆಚ್ಚಿನ ಜನ ಸೇರದಂತೆ  ಭಕ್ತಾಧಿಗಳಿಗೆ ಅನುವು ಮಾಡುವುದು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ ಸಂಗೀತ, ನೃತ್ಯ, ಇನ್ನಿತರೆ ಯಾವುದೇ ಮನರಂಜನಾ ಕಾರ್ಯ ಕ್ರಮಗಳಿಗೆ ಅವಕಾಶವಿಲ್ಲ. ಗಣೇಶ ಮೂರ್ತಿಯನ್ನು ತರುವಾಗ ಹಾಗೂ ವಿರ್ಸಜಿಸುವಾಗ ಯಾವುದೇ ಮೆರವಣಿಗೆ ನಡೆಸದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಷರತ್ತುಗಳ ವಿಧಿಸಿದೆ.

error: Content is protected !!