ನಗರದಲ್ಲಿ ಎಸ್ಎಫ್ಐ ಹಾಗೂ ಎಐಎಸ್ಎಫ್ ಪ್ರತಿಭಟನೆ
ದಾವಣಗೆರೆ, ಆ.19- ಪ್ರಥಮ ಹಾಗೂ ದ್ವಿತೀಯ ವರ್ಷದ ಕಾನೂನು ಪರೀಕ್ಷೆಗಳನ್ನು ರದ್ದುಪಡಿಸಿ ಮುಂದಿನ ತರಗತಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಎಸ್ ಎಫ್ ಐ ಹಾಗೂ ಎಐಎಸ್ ಎಫ್ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಪ್ರತಿಭಟನಾ ಮೆರವಣಿಗೆ ಮುಖೇನ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಕಾನೂನು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಈಗಾಗಲೇ ದೇಶಾದ್ಯಂತ ಕೊರೋನ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆದಿದ್ದು, ದೇಶದ ಪ್ರತಿಯೊಂದು ಶಾಲಾ-ಕಾಲೇಜುಗಳು ಹಾಗೂ ರಂಗಗಳು ಸ್ಥಗಿತಗೊಂಡಿದೆ. ಇದನ್ನು ಮನಗಂಡು ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಹಾಗೂ ಕರ್ನಾಟಕ ಸರ್ಕಾರ ಹಾಗೂ ಯುಜಿಸಿ ತನ್ನ ವ್ಯಾಪ್ತಿಯಲ್ಲಿ ಬರುವ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ಅವರನ್ನು ಈ ಹಿಂದೆ ಕಾಲೇಜಿನಲ್ಲಿ ನಡೆದ ಕಿರುಪರಿಕ್ಷೆಗಳ ಆಧಾರದ ಮೇಲೆ ಗ್ರೇಡ್ ಕೊಟ್ಟು ಉತ್ತಿರ್ಣ ಮಾಡಲು ಆದೇಶ ಮಾಡಿದೆ. ಈಗಾಗಲೇ ಪ್ರತಿಯೊಂದು ಕಾಲೇಜುಗಳಲ್ಲಿ ತರಗತಿಗಳನ್ನು ಆನ್ ಲೈನ್ ಮೂಲಕ
ನಡೆಸಿದ್ದು, ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳನ್ನು ಆನ್ ಲೈನ್ ತರಗತಿಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳ ದೃಷ್ಟಿಯಿಂದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವತಿಯಿಂದ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಎಸ್ ಎಫ್ ಐ ಜಿಲ್ಲಾ ಸಂಚಾಲಕ ಲಕ್ಷ್ಮಣ್ ರಾಮಾವತ್ ಒತ್ತಾಯಿಸಿದರು.
ಒಂದು ವೇಳೆ ಪರೀಕ್ಷೆಗಳನ್ನು ನಡೆಸಿದರೆ ಪರೀಕ್ಷಾ ಶುಲ್ಕವನ್ನು ಪಾವತಿಸದೆ ಪರೀಕ್ಷೆಯನ್ನು ಬಹಿಷ್ಕರಿಸುವ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಐಎಸ್‌ಎಫ್ ರಾಜ್ಯ ಕಾರ್ಯದರ್ಶಿ ರಮೇಶ್, ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ರಾಕೇಶ್, ಕಾನೂನು ವಿದ್ಯಾರ್ಥಿಗಳಾದ ಮಂಜುನಾಥ, ರಘುರಾಜ್ , ವೆಂಕಟೇಶ್, ಸುನಿಲ್, ಶಶಾಂಕ್, ಮಿರ್ಜಾ ಆಸಾದ್, ಕಿರಣ್, ಹರೀಶ್,ಅಂಜಲಿ, ಸಿಂಚನಾ ಸೇರಿದಂತೆ ಇತರರು ಭಾಗವಹಿಸಿದ್ದರು.