ದಾವಣಗೆರೆ, ಡಿ.29- ಕನ್ನಡ ಕಾಯಕ ವರ್ಷಾಚರಣೆ ಅಡಿಯಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಹಾಗೂ ನಗರ ಪಾಲಿಕೆಯ ಕನ್ನಡ ಜಾಗೃತಿ ಸಮಿತಿ ವತಿಯಿಂದ ನಗರದಲ್ಲಿ ಇಂದು ಬ್ಯಾಂಕುಗಳಲ್ಲಿ ಕನ್ನಡ ಬಳಕೆಯ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು.
ಕುವೆಂಪು ಕನ್ನಡ ಭವನದಿಂದ ಎರಡೂ ಸಮಿತಿಯ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಘೋಷ ವಾಕ್ಯದ ಫಲಕಗಳನ್ನು ಕೈಯಲ್ಲಿ ಹಿಡಿದು ಮೌನ ಮೆರವಣಿಗೆ ಮೂಲಕ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕಚೇರಿಗೆ ತೆರಳಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆದ ಕೆನರಾ ಬ್ಯಾಂಕ್ನ ವಿಭಾಗೀಯ ಪ್ರಬಂಧಕ ಸುಶ್ರುತ್ ಶಾಸ್ತ್ರಿ ಅವರಿಗೆ ಬ್ಯಾಂಕ್ ನಲ್ಲಿ ಕನ್ನಡ ಬಳಕೆಯ ಹಕ್ಕೊತ್ತಾಯದ ಮನವಿ ಸಲ್ಲಿಸಿದರು. ಜಿಲ್ಲೆಯ 32 ಬ್ಯಾಂಕುಗಳ ಮುಖ್ಯಸ್ಥರಿಗೂ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕುರಿತಂತೆ ಜಾಗೃತಿ ಮೂಡಿಸಿದರು.
ನಂತರ ಜಿಲ್ಲಾಡಳಿತ ಭವನದಲ್ಲಿ ನಡೆಯುತ್ತಿದ್ದ ಮಾರ್ಗದರ್ಶಿ ಬ್ಯಾಂಕ್ನ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆಗೆ ತೆರಳಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಒ ಪದ್ಮ ಬಸವಂತಪ್ಪ ಅವರಿಗೆ ಹಕ್ಕೊತ್ತಾಯವನ್ನು ಸಲ್ಲಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಂಜುನಾಥ್ ಕುರ್ಕಿ ಮಾತನಾಡಿ, ಬ್ಯಾಂಕು ಗಳಲ್ಲಿ ಎಲ್ಲಾ ವ್ಯವಹಾರಗಳು, ಸುತ್ತೋಲೆಗಳು ಹಾಗೂ ಮಾಹಿತಿಗಳು ಕನ್ನಡದಲ್ಲಿಯೇ ಇದ್ದರೆ ಗ್ರಾಹಕರಿಗೆ ಅನುಕೂಲ. ತ್ರಿಭಾಷಾ ಸೂತ್ರ ಅನುಸರಿಸುವಾಗ ಕನ್ನಡಕ್ಕೆ ಪ್ರಾಧಾನ್ಯತೆ ಇರ ಬೇಕು. ಬ್ಯಾಂಕಿನ ಜಾಲತಾಣಗಳು, ಎಟಿಎಂ ವ್ಯವ ಹಾರಗಳು, ಸೂಚನಾ ಫಲಕಗಳೂ ಸೇರಿದಂತೆ ಪ್ರದರ್ಶನ ಪತ್ರಗಳು ಕನ್ನಡದಲ್ಲಿಯೇ ಇರಬೇಕು. ಗ್ರಾಹಕರು ಚೆಕ್, ಚಲನ್ ಮೊದಲಾದವುಗಳನ್ನು ಕನ್ನಡದಲ್ಲಿಯೇ ಭರ್ತಿ ಮಾಡಬಹುದು. ಇದನ್ನು ಬ್ಯಾಂಕುಗಳೂ ಕೂಡ ಪ್ರೋತ್ಸಾಹಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎನ್.ಟಿ. ಎರಿಸ್ವಾಮಿ ಮಾತನಾಡಿ, ನಿತ್ಯ ವ್ಯವಹಾರದ ಅಗತ್ಯ ಪದಗಳ ಕೈಪಿಡಿಯನ್ನು ಸಿದ್ಧಪಡಿಸಿ ಅದನ್ನು ಗ್ರಾಹಕರಿಗೆ ದೊರಕುವಂತೆ ಮಾಡಬೇಕು. ಗ್ರಾಹಕರ ಅನುಕೂಲಕ್ಕಾಗಿ ಕನ್ನಡ ಬಲ್ಲವರನ್ನು ಕನ್ನಡ ಸಂಪರ್ಕಾಧಿಕಾರಿಯಾಗಿ ನೇಮಿಸಿ ಪರಿ ಣಾಮಕಾರಿಯಾಗಿ ಕನ್ನಡವನ್ನು ಅನುಷ್ಠಾನಗೊಳಿಸ ಬಹುದು. ಬ್ಯಾಂಕ್ ಸಿಬ್ಬಂದಿಗಳಿಗಾಗಿ ವಾರಕ್ಕೆ ಒಮ್ಮೆಯಾದರೂ ಕನ್ನಡ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಮನವಿ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ ಮಾತನಾಡಿ, ಬ್ಯಾಂಕುಗಳಲ್ಲಿ ಕನ್ನಡವನ್ನು ಬಳಕೆಗೆ ತರುವುದು ಬಹುಮುಖ್ಯವಾಗಿದೆ ಎಂದರಲ್ಲದೆ, ಎಟಿಎಂಗಳಲ್ಲಿ ಕನ್ನಡ ಮಾಯವಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದ್ದು, ಶೀಘ್ರವೇ ಈ ಸಂಬಂಧ ಬ್ಯಾಂಕುಗಳಲ್ಲಿ ಕ್ರಮ ಕೈಗೊಂಡು ಕನ್ನಡ ಬಳಕೆಗೆ ಪ್ರಾಶಸ್ತ್ಯ ನೀಡಬೇಕಿದೆ ಎಂದರು.
ಅಭಿಯಾನದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎಸ್.ಎಸ್. ಸಿದ್ಧರಾಜು, ದೇವಿಕ ಸುನಿಲ್, ಹೆಚ್.ಕೆ. ಸತ್ಯಭಾಮ, ನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಬಾ.ಮ. ಬಸವರಾಜಯ್ಯ, ಬಂಕಾಪುರದ ಚೆನ್ನಬಸಪ್ಪ, ಎ. ಮಹಲಿಂಗಪ್ಪ, ಬಿ. ದಿಳ್ಳೆಪ್ಪ, ಸಹನಾ ರವಿ, ಪುಷ್ಪಾವತಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಕಚೇರಿ ಕಾರ್ಯದರ್ಶಿ ಜಿ.ಆರ್. ಷಣ್ಮುಖಪ್ಪ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಕನ್ನಡ ಪರ ಸಂಘಟನೆಯ ಕೆ.ಜಿ. ಯಲ್ಲಪ್ಪ, ಇಸ್ಮಾಯಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.