ರಾಜ್ಯದ ಬೆನ್ನಿಗೆ ಬಿದ್ದ ರೂಪಾಂತರಿ ವೈರಸ್

ಇಂಗ್ಲೆಂಡ್‌ನಿಂದ  ಬೆಂಗಳೂರಿಗೆ ಬಂದ ಮೂವರಲ್ಲಿ ಸೋಂಕು ಪತ್ತೆ

ಬೆಂಗಳೂರು, ಡಿ. 29- ಬ್ರಿಟನ್‍ನ ರೂಪಾಂತರಿ ಕೊರೊನಾ ಸೋಂಕು ರಾಜ್ಯದ ಬೆನ್ನಿಗೆ ಬಿದ್ದಿದೆ. 

ಇಂಗ್ಲೆಂಡ್‍ನಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದ ಮೂರು ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದನ್ನು ಭಾರತೀಯ ವೈದ್ಯ ಕೀಯ ಪರಿಷತ್ -ಐಸಿಎಂಆರ್ ಖಚಿತಪಡಿಸಿದೆ. 

ರಾಜ್ಯಕ್ಕೆ ಈ ರಾಷ್ಟ್ರದಿಂದ ಬಂದ 26 ಜನರಿಗೆ ಕೊರೊನಾ ಸೋಂಕು ತಗುಲಿತ್ತು, ಇವರನ್ನು ಸರ್ಕಾರಿ ಆಸ್ಪತ್ರೆಗಳಲ್ಲಿನ ಐಸೋಲೇಟೆಡ್ ಘಟಕ ದಲ್ಲಿ ಇರಿಸಿ, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕು ದೃಢಪಟ್ಟ ತಕ್ಷಣವೇ ಇದು ರೂಪಾಂತರಿ ಸೋಂಕೇ ಎಂಬ ಬಗ್ಗೆ ಮಾಹಿತಿ ಪಡೆಯಲು ನಿಮ್ಹಾನ್ಸ್‍ನ ವಿಶೇಷ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ, ಎರಡು ದಿನಗಳ ಹಿಂದೆ ಐಸಿಎಂಆರ್‍ಗೆ ಕಳುಹಿಸಲಾಗಿತ್ತು. 

ಇದರ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೂ ಆಸ್ಪತ್ರೆ ಆಡಳಿತ ಮಂಡಳಿ ನೀಡಿರಲಿಲ್ಲ. 

ವರದಿಯನ್ನು ಪರಿಶೀಲಿಸಿದ ನಂತರ ಐಸಿಎಂಆರ್, ಇಂದು ಬೆಳಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿ, ತಾಯಿ ಮತ್ತು ಮಗು ಸೇರಿದಂತೆ 3 ಜನರಲ್ಲಿ  ಹೊಸ ವೈರಾಣು ಕಂಡುಬಂದಿದೆ ಎಂದು ತಿಳಿಸಿರುವುದಲ್ಲದೆ, ಈ ಸೋಂಕಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಮತ್ತು ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಸವಿವರವಾದ ಮಾಹಿತಿ ನೀಡಿದೆ. 

ವರದಿ ರಾಜ್ಯ ಸರ್ಕಾರದ ಕೈ ಸೇರುತ್ತಿದ್ದಂತೆ, ಸೋಂಕಿತರ ಮನೆ ಮತ್ತು ಫ್ಲ್ಯಾಟ್ ಹಾಗೂ ಆ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ. 

ಆ ಪ್ರದೇಶದ ಜನರಿಗೆ ಸ್ಥಳೀಯ ಬಿಬಿಎಂಪಿ ಆಡಳಿತದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿ, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. 

ಸೋಂಕಿತರ ಎರಡನೇ ಮತ್ತು ಮೂರನೇ ಸಂಪರ್ಕ ಹೊಂದಿದವರನ್ನು ಗುರುತಿಸಿ, ಅವರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸುವುದಲ್ಲದೆ ಕ್ವಾರಂಟೈನ್ ಮಾಡಲಾಗುತ್ತಿದೆ. 

ಐರೋಪ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಂದ ಕಳೆದ ಮೂರು ವಾರಗಳಿಂದ ರಾಜ್ಯಕ್ಕೆ ಬಂದಿರುವವರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಇದರಲ್ಲಿ ಇನ್ನೂ ಕೆಲವರ ಪರೀಕ್ಷೆ ಫಲಿತಾಂಶ ಬರಬೇಕಿದೆ.

ರಾಷ್ಟ್ರದಲ್ಲಿ ಇದುವರೆಗೆ ಆರು ಮಂದಿಯಲ್ಲಿ ಹೊಸ ಸೋಂಕು ಪತ್ತೆಯಾಗಿದ್ದು ಇವರಲ್ಲಿ ಮೂರು ಮಂದಿ ಕರ್ನಾಟಕದವರೇ ಆಗಿದ್ದಾರೆ.

ಬಹುತೇಕ ಕೋವಿಡ್ ಲಕ್ಷಣಗಳೇ ಈ ಸೋಂಕಿತರಲ್ಲಿಯೂ ಕಂಡುಬಂದಿದೆ, ಆದರೆ ಕೊರೊನಾಗಿಂತ ಈ ಸೋಂಕು ಹರಡುವ ವೇಗ ತೀವ್ರವಾಗಿರುತ್ತದೆ.

ಕೋವಿಡ್ ತಡೆಗೆ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೋ, ಅದನ್ನೇ ಮುಂದುವರೆಸುವಂತೆ ತಜ್ಞ ವೈದ್ಯರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ಇಂಗ್ಲೆಂಡ್‍ನಿಂದ 2,127 ಪ್ರಯಾಣಿಕರು ಇದುವರೆಗೆ ರಾಜ್ಯಕ್ಕೆ ಆಗಮಿಸಿದ್ದು, ಅವರಲ್ಲಿ 1,614 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಇವರಲ್ಲಿ 26 ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಇನ್ನೂ ಕೆಲವರ ವರದಿ ಬರಬೇಕಿದೆ.

ಸುದ್ದಿಗೋಷ್ಟೀಯಲ್ಲಿ ಈ ಮಾಹಿತಿ ಖಚಿತ ಪಡಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಬ್ರಿಟನ್‍ನಲ್ಲಿ ಕಾಣಿಸಿಕೊಂಡಿರುವ ಎರಡನೇ ಮಾದರಿ ಸೋಂಕು ರಾಜ್ಯದಲ್ಲಿ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದರು.

ಈ ಸಂಬಂಧ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ, ಬ್ರಿಟನ್‍ನಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ, ಅವರಲ್ಲಿ 208 ಮಂದಿ ಪರೀಕ್ಷೆಗೆ ಒಳಪಡದೆ ನಾಪತ್ತೆಯಾಗಿದ್ದಾರೆ, ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.

ರಾಜ್ಯ ಸರ್ಕಾರ ಈ ವಿಷಯದಲ್ಲಿ ಎಲ್ಲಿಯೂ ಎಡವಿಲ್ಲ, ಕೇಂದ್ರದ ಮಾಹಿತಿ ಬರುತ್ತಿದ್ದಂತೆಯೇ ವಿದೇಶದಿಂದ ಬಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದೇವೆ.

ಇದರಲ್ಲಿ ಕೊರೊನಾ ಸೋಂಕು ಕೆಲವರಲ್ಲಿ ಕಂಡುಬಂದ ನಂತರ, ಅವರ ಎರಡನೇ ಮತ್ತು ಮೂರನೇ ಸಂಪರ್ಕಿತರನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಿರುವುದಲ್ಲದೆ, ಅವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದೇವೆ.

ನಾಪತ್ತೆಯಾಗಿರುವವರು ತಮ್ಮ ಸಂಪರ್ಕಗಳನ್ನು ಕಡಿದುಕೊಂಡಿದ್ದಾರೆ, ಆದರೂ ಪೊಲೀಸರು ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೊಸ ವೈರಾಣು ಸೋಂಕು ಕಾಣಿಸಿಕೊಂಡವರ ಜೊತೆ ವಿಮಾನದಲ್ಲಿ ಬಂದ ಎಲ್ಲರನ್ನೂ ಪತ್ತೆ ಹಚ್ಚಿ ಅವರ ಆರೋಗ್ಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲಾಗುವುದು, ಅಷ್ಟೇ ಅಲ್ಲ, ಎರಡು ಮತ್ತು ಮೂರನೇ ಸಂಪರ್ಕಿತರನ್ನೂ ಪತ್ತೆ ಹಚ್ಚಿ ನಿಗಾ ಇಡಲಾಗುವುದು ಎಂದರು.

error: Content is protected !!