ಕಾಂಗ್ರೆಸ್ ಪಕ್ಷಕ್ಕಾಗಿ ಕಸ ಗುಡಿಸಲಿಕ್ಕೂ ಸಿದ್ಧ : ಡಿಬಿ
ದಾವಣಗೆರೆ, ಡಿ.26- ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ತಮಗೆ ಕಾಂಗ್ರೆಸ್‍ನ ಹಮಾಲರು ಎಂದು ಕರೆದಿದ್ದಾರೆ. ಅದಕ್ಕಾಗಿ ಜಾಧವ್ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಡಿ.ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಹಮಾಲರು ಎಂದರೆ ಮೈಮುರಿದು, ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿಯುವ ಶ್ರಮಿಕ ವರ್ಗ. ಈ ವರ್ಗಕ್ಕೆ ನಮ್ಮನ್ನು ಸೇರಿಸಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಹಮಾಲಿಗಳು ಇಲ್ಲದೆ ದೇಶದ ಅಭಿವೃದ್ಧಿಯ ಚಕ್ರ ಮುಂದೆ ಸಾಗದು ಎಂದಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ 135 ವರ್ಷಗಳ ಇತಿಹಾಸವಿದೆ. ಮೇಲಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೆಮ್ಮೆ ಪಕ್ಷಕ್ಕಿದೆ. ಇಂತಹ ಐತಿಹಾಸಿಕ ಕಾಂಗ್ರೆಸ್ ಪಕ್ಷದ ಹಮಾಲರಾಗಲಿಕ್ಕೆ ಪುಣ್ಯ ಬೇಕು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕಾಗಿ ಹಮಾಲಿ ಕೆಲಸವಷ್ಟೇ ಅಲ್ಲ, ಕಸ ಗುಡಿಸಲಿಕ್ಕೂ ಸಿದ್ಧ ಎಂದು ಬಸವರಾಜ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹೆತ್ತ ತಾಯಿಯಂತೆ ಪ್ರೀತಿಸುತ್ತೇವೆ. ಅಪಾರವಾದ ಗೌರವ ಇಟ್ಟುಕೊಂಡಿದ್ದೇವೆ. ಇಂತಹ ಚರಿತ್ರಾರ್ಹ ಕಾಂಗ್ರೆಸ್ ಪಕ್ಷದ ಹಮಾಲರಾಗಲು ಯೋಗ ಬೇಕು ಅಂತಹ ಯೋಗವನ್ನು ನಾವು ಪಡೆದಿದ್ದೇವೆ. ಅದಕ್ಕಾಗಿ ಸಂತೋಷಿಸುತ್ತೇವೆ ಎಂದಿದ್ದಾರೆ.