ಪಾರದರ್ಶಕ ಗ್ರಾ.ಪಂ.ಚುನಾವಣೆಗೆ ತಾಲ್ಲೂಕಾಡಳಿತ ಸಿದ್ಧತೆ

ಪಾರದರ್ಶಕ ಗ್ರಾ.ಪಂ.ಚುನಾವಣೆಗೆ ತಾಲ್ಲೂಕಾಡಳಿತ ಸಿದ್ಧತೆ - Janathavaniಹರಿಹರ,ಡಿ.23- ಡಿ. 27 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹರಿಹರ ತಾಲ್ಲೂಕಿನ 23 ಗ್ರಾಮ ಪಂಚಾಯ್ತಿಗಳ ಚುನಾವಣೆಯನ್ನು ಯಾವುದೇ ಲೋಪ ದೋಷಗಳಾಗದಂತೆ ಶಾಂತಿಯುತ ಮತ್ತು ಪಾರದರ್ಶಕವಾಗಿ ನಡೆಸಲು ತಾಲ್ಲೂಕು ಆಡಳಿತದಿಂದ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎರಡನೇ ಹಂತದಲ್ಲಿ ನಡೆಯುವ ಹರಿಹರ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಚುನಾವಣೆ 23 ಗ್ರಾಮ ಪಂಚಾಯ್ತಿಗಳ 113 ಕ್ಷೇತ್ರಗಳಲ್ಲಿ 299 ಸ್ಥಾನಗಳಿಗೆ 152 ಮತಗಟ್ಟೆ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು  ಮತದಾರರು 1,09, 312. ಪುರುಷ ಮತದಾರರು 55,189, ಮಹಿಳಾ ಮತದಾರರು 54,123 ಇದ್ದಾರೆ.

1999 ನಾಮಪತ್ರಗಳು ಸಲ್ಲಿಕೆ ಆಗಿದ್ದು, ಅದರಲ್ಲಿ 5 ನಾಮಪತ್ರಗಳು ತಿರಸ್ಕೃತಗೊಂಡಿವೆ.  55 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು,  ಅಂತಿಮವಾಗಿ ಕಣದಲ್ಲಿ 777 ಅಭ್ಯರ್ಥಿಗಳು ಉಳಿದಿದ್ದಾರೆ. ಅದರಲ್ಲಿ 420 ಸಾಮಾನ್ಯ ಅಭ್ಯರ್ಥಿಗಳು, 357 ಮಹಿಳಾ ಮೀಸಲು ಅಭ್ಯರ್ಥಿಗಳು  ಒಟ್ಟಾರೆಯಾಗಿ 169 ಪುರುಷರು 182 ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ.

ಮಹಿಳಾ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಎಸ್.ಸಿ. ಸಾಮಾನ್ಯ 22, ಎಸ್.ಸಿ. ಮಹಿಳೆ 30, ಎಸ್.ಟಿ. ಸಾಮಾನ್ಯ  13, ಎಸ್.ಟಿ. ಮಹಿಳೆ 28, ಒಬಿಸಿ ಎ ವರ್ಗ 22, ಓಬಿಸಿ ಎ ವರ್ಗ ಮಹಿಳೆ 38, ಓಬಿಸಿ ಬಿ ವರ್ಗ 9 ಒಬಿಸಿ ಬಿ ವರ್ಗ ಮಹಿಳೆ 6, ಸಾಮಾನ್ಯ 103, ಸಾಮಾನ್ಯ ಮಹಿಳೆ 80 ಹೀಗೆ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ  ಎಂದು ಹೇಳಿದರು.

152 ಮತಗಟ್ಟೆ ಕೇಂದ್ರಗಳಲ್ಲಿ 34 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆ ಕೇಂದ್ರಗಳನ್ನು ಗುರುತಿಸಲಾಗಿದೆ. 804 ಚುನಾವಣಾ ಸಿಬ್ಬಂದಿ ಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ 400 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಇನ್ನೂ 400 ಸಿಬ್ಬಂದಿಗಳಿಗೆ ಸಹಾಯಕ ಸಿಬ್ಬಂದಿ ಎಂದು ಗುರುತಿಸಲಾಗಿದೆ. 

ತಾಲ್ಲೂಕಿನ ಗ್ರಾಮಗಳಲ್ಲಿ ನಡೆಯುವ ವಾರದ ಸಂತೆ ಹಾಗೂ ಬೆಳ್ಳೂಡಿ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಕಾರ್ತಿಕ ಮಹೋತ್ಸವ ಆಚರಣೆ ನಿಷೇಧ ಮಾಡಲಾಗಿದೆ. ಸೈನಿಕ ಸೇವೆ ಮಾಡುತ್ತಿರುವ 42 ಜನರಿಗೆ ಮತ್ತು ಚುನಾವಣೆ ಕರ್ತವ್ಯದಲ್ಲಿ ನಿರತರಾದ 135 ಸಿಬ್ಬಂದಿಗಳಿಗೆ ಪೋಸ್ಟಲ್ ಮತದಾನ ಮಾಡಲಿಕ್ಕೆ ವ್ಯವಸ್ಥೆ  ಮಾಡಲಾಗಿದೆ. ಸುಮಾರು 35 ಬಸ್ ವ್ಯವಸ್ಥೆ ಸೇರಿದಂತೆ ಮತಗಟ್ಟೆ ಕೇಂದ್ರಕ್ಕೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಕ್ಷೇತ್ರದ 23 ಗ್ರಾಮಗಳಲ್ಲಿ ದಿನಾಂಕ
27 ರಂದು ನಡೆಯುವ ಚುನಾವಣೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಡೆಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್‌ ರಾಮಚಂದ್ರಪ್ಪ ಹೇಳಿದರು. ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.    

error: Content is protected !!