ಪದವಿ ಪೂರಕ ಪರೀಕ್ಷೆಗೆ ಅವಕಾಶ

ದಾವಣಗೆರೆ, ಡಿ.19- ಕೋವಿಡ್-19ರ ಕಾರಣಕ್ಕಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾಗಿದ್ದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ದಾವಣಗೆರೆ ವಿಶ್ವವಿದ್ಯಾನಿಲಯವು 2021 ರ ಜನವರಿ 6 ರಿಂದ ವಿಶೇಷ ಪೂರಕ ಪರೀಕೆಯನ್ನು ಏರ್ಪಡಿಸಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ವಿಶೇಷ ಪರೀಕ್ಷೆ ನಡೆಸುತ್ತಿರುವ ರಾಜ್ಯದ ಏಕೈಕ ವಿಶ್ವವಿದ್ಯಾ ನಿಲಯ ಇದಾಗಿದೆ. ಪ್ರಸ್ತುತ ವಿಶ್ವ ವಿದ್ಯಾನಿಲಯದ ಯೋಜನೆ ಯಿಂದ ಒಟ್ಟು 15,251 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಲ್ಲಿ ಸ್ನಾತಕ ಪದವಿಯ 15,155 ಮತ್ತು ಸ್ನಾತಕೋತ್ತರ ಪದವಿಯ 96 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.

ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಜೊತೆಗೆ ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ನಡೆದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಒಂದು ಬಾರಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಪರೀಕ್ಷೆಗೆ ದಂಡ ಸಹಿತ ಅರ್ಜಿ ಸಲ್ಲಿಸಲು ಡಿಸೆಂಬರ್ 16ರಿಂದ 21ರವರೆಗೆ ಅವಕಾಶ ನೀಡಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ತಿಳಿಸಿದ್ದಾರೆ. ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆಗಳು ಜನವರಿ 6ರಿಂದ ನಡೆಯಲಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಪರೀಕ್ಷಾ ಮೌಲ್ಯಮಾಪನ ಪೂರ್ಣಗೊಳಿಸಿದ ಒಂದು ಗಂಟೆಯಲ್ಲಿಯೇ ಫಲಿತಾಂಶ ಪ್ರಕಟಿಸುವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ತಾಂತ್ರಿಕ ಕಾರಣಗಳಿದ್ದರೆ ಪರಿಹರಿಸಿ ಒಂದೇ ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.

error: Content is protected !!