ರೇಣುಕಾಚಾರ್ಯ ಕ್ಷಮೆ ಕೇಳದಿದ್ದರೆ ಮುಖಕ್ಕೆ ಮಸಿ: ಹಸಿರು ಸೇನೆ ಎಚ್ಚರಿಕೆ

ದಾವಣಗೆರೆ, ಡಿ. 19- ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ಮುಖಕ್ಕೆ ಮಸಿ ಬಳಿಯಲಾಗುವುದು, ಅವರ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ,  ರೇಣುಕಾಚಾರ್ಯ ಅವರ ತಂದೆ ಓರ್ವ ಶಿಕ್ಷಕ. 10 ಜನ ಮಕ್ಕಳಿರುವ ಅವರಿಗೆ ಕೇವಲ 8 ಎಕರೆ ಜಮೀನಿತ್ತು. ರೇಣುಕಾಚಾರ್ಯ ಶಾಸಕನಾದ ಮೇಲೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆಯೂ ಮುಖ್ಯಮಂತ್ರಿ ಯಡಿಯೂರಪ್ಪ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು. ಕೋಡಿಹಳ್ಳಿ ಚಂದ್ರಶೇಖರ್ ಅವರ ಆಸ್ತಿ ಅಕ್ರಮವಾಗಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು.

ಸಾರಿಗೆ ನಿಗಮದಲ್ಲಿ ಶೇ.90ರಷ್ಟು ಗ್ರಾಮೀಣ ಭಾಗದ ಯುವಕರೇ ಕೆಲಸ ಮಾಡುತ್ತಿದ್ದಾರೆ. ಅವರ ಪರ ಹೋರಾಟಕ್ಕಿಳಿದದ್ದು ತಪ್ಪಲ್ಲ ಎಂದು ಸಮರ್ಥಿಸಿಕೊಂಡ ಅವರು, ಯಡಿಯೂರಪ್ಪನವರ ಓಲೈಕೆಗೆ ರೇಣುಕಾಚಾರ್ಯ ಢೋಂಗಿ ನಾಟಕವಾಡುತ್ತಿದ್ದಾರೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ ಮಾತನಾಡುತ್ತಾ, ರೈತ ಸಂಘಟನೆಗಳ ಬೆಳವಣಿಗೆ ಸಹಿಸಲಾಗದೇ ರೇಣುಕಾಚಾರ್ಯ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರದ್ದೇ ಸರ್ಕಾರವಿದೆ ಬೇಕಾದರೆ ಕೋಡಿಹಳ್ಳಿ ಅವರ ಅಕ್ರಮ ಆಸ್ತಿ ತನಿಖೆ ನಡೆಸಿಕೊಳ್ಳಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರೇಕಟ್ಟೆ ಕಲೀಂವುಲ್ಲಾ, ಮಂಜುನಾಥ ಮಲ್ಲಶೆಟ್ಟಿಹಳ್ಳಿ, ಬಸವರಾಜ ದಾಗಿನಕಟ್ಟೆ, ಪ್ರಶಾಂತ್ ಮತ್ತೂರು ಉಪಸ್ಥಿತರಿದ್ದರು.

error: Content is protected !!