ದಾವಣಗೆರೆ, ಡಿ.19- ವಿಧಾನ ಪರಿಷತ್ನಲ್ಲಿ ಇತ್ತೀಚೆಗೆ ನಡೆದ ಗಲಾಟೆ, ಗದ್ದಲ, ಕೋಲಾಹಲಕ್ಕೆ ಬಿಜೆಪಿಯ ಅಧಿಕಾರ ದಾಹವೇ ಕಾರಣವೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರ ಡಿ. ಬಸವರಾಜ್ ಆರೋಪಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಡೆದ ಘಟನೆ ದೇಶದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದಿರುವ ಅವರು, ಅಂದಿನ ಕಲಾಪದ ಬೆಲ್ ಆಗುತ್ತಿರುವಾಗ, ಸಭಾಪತಿಗಳು ಪೀಠಕ್ಕೆ ಬರುವ ಮೊದಲೇ ಅವರು ಸದನಕ್ಕೆ ಬರದಂತೆ ತಡೆಯಲು ಬಾಗಿ ಲಿಗೆ ಬೀಗ ಹಾಕಿದ್ದ ಬಿಜೆಪಿಯವರು, ಸಭಾಪತಿಯವರು ಕಲಾಪಕ್ಕೆ ಬರದಂತೆ ತಡೆಯಲು ನಿರ್ಧರಿಸಿದ್ದ ಬಿಜೆಪಿಯ ವರು ಸಭಾಪತಿಯವರ ಅನುಮತಿ ಇಲ್ಲದೆ ಉಪಸಭಾಪತಿ ಯನ್ನು ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡುಹಗಲೇ ಸಂವಿ ಧಾನಕ್ಕೆ ಅಪಚಾರವೆಸಗಿದ್ದಾರೆಂದು ಅವರು ದೂರಿದ್ದಾರೆ.
ಈ ಕೋಲಾಹಲಕ್ಕೆ ಬಿಜೆಪಿ ನೇರವಾಗಿ ಕಾರಣವಾಗಿದ್ದರೂ ಸಹ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬಿಜೆಪಿಯ ಸಚಿವರುಗಳು ಅಂದಿನ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯವೆಂದು ಅವರು ಟೀಕಿಸಿದ್ದಾರೆ.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಕಾನೂನು ಸಚಿವ ಮಾಧುಸ್ವಾಮಿಯವರು ಅಕ್ರಮವಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯನ್ನು ಕೂರಿಸಿ ಈ ಘಟನೆಗೆ ನೇರ ಕಾರಣರಾಗಿದ್ದಾರೆಂದು ತಿಳಿಸಿರುವ ಡಿ. ಬಸವರಾಜ್ ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಸಂವಿಧಾನ ವಿರೋಧಿ ಗೋ ಹತ್ಯೆ ನಿಷೇಧ ಹಾಗೂ ಲವ್ಜಿಹಾದ್ ಮಸೂದೆಗಳನ್ನು ಅಂಗೀಕ ರಿಸಲು ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತವಿಲ್ಲದ ಕಾರಣ ಈ ರೀತಿ ಅಡ್ಡ ದಾರಿ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜ್, ಈ ಘಟನೆಯಲ್ಲಿ ಅಪರಾಧಿ ಸ್ಥಾನದಲ್ಲಿರುವ ಬಿಜೆಪಿಯವರು ತಮ್ಮ ಪಕ್ಷದ ರಾಜ್ಯಪಾಲರಿದ್ದಾರೆಂದು ರಾಜ್ಯಪಾಲರಿಗೆ ದೂರು ನೀಡಿರುವುದು ಹಾಸ್ಯಾಸ್ಪದ ಎಂದು ಅವರು ಲೇವಡಿ ಮಾಡಿದ್ದಾರೆ.