ರೈತರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವವರ ಜೊತೆ ಮಾತನಾಡಿ ಪ್ರಯೋಜನವಿಲ್ಲ : ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ನವದೆಹಲಿ, ಡಿ. 18 – ರೈತರ ಪ್ರತಿಭ ಟನೆ ಅಂತ್ಯಗೊಳಿಸಲು ರೈತರ ಜೊತೆ ಅನೌ ಪಚಾರಿಕ ಮಾತುಕತೆಗಳು ನಡೆಯುತ್ತಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರಾದರೂ, ರೈತರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವವರ ಜೊತೆ ಮಾತನಾಡಿ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
ವರ್ಷಾಂತ್ಯದಲ್ಲೇ ಪ್ರತಿಭಟನೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂಬ ಆಶಾಭಾವನೆ ವ್ಯಕ್ತಪಡಿಸಿರುವ ತೋಮರ್, ಮೋದಿ ಸರ್ಕಾರ ಕೃಷಿಕ ಸಮುದಾಯದ ನಿಜವಾದ ಸಮಸ್ಯೆಗಳನ್ನು ಬಗೆಹರಿಸಲು ಬದ್ಧವಾಗಿದೆ ಎಂದಿದ್ದಾರೆ.
ಪ್ರತಿಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ ಎಂದು ಹೇಳಿರುವ ತೋಮರ್, ವಿರೋಧ ಪಕ್ಷಗಳು ಸುಧಾರಣಾ ಪ್ರಕ್ರಿಯೆಯ ನಿಲುವು ಬದಲಿಸುತ್ತಿವೆ ಹಾಗೂ ವಿಷಯವನ್ನು ರಾಜಕೀಯಗೊಳಿಸುತ್ತಿವೆ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದ ರ್ಶನ ನೀಡಿದ್ದ ತೋಮರ್, ಮೂರು ಕೃಷಿ ಕಾಯ್ದೆಗಳು ರೈತರಿಗೆ ಲಾಭದಾಯಕವಾಗಿವೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ಹಾಗೂ ಎಪಿಎಂಸಿ ವ್ಯವಸ್ಥೆ ಮುಂದುವರೆಯುವ ಬಗ್ಗೆ ಲಿಖಿತ ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದ ತೋಮರ್, ನಾನು §ನಿಜವಾದ¬ ರೈತರ ಜೊತೆ ಮಾತನಾಡುತ್ತೇನೆ ಎಂದಿದ್ದರು. ಆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ನಿಜವಾದ ರೈತರು ಎಂದರೆ, ರೈತರ ಬಗ್ಗೆ ನಿಜವಾದ ಕಾಳಜಿ ಇರುವವರು ಎಂದರ್ಥ. ರೈತರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವವರ ಜೊತೆ ಮಾತನಾಡಿ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
ನಾವು ರೈತ ಸಂಘಟನೆಗಳ ಜೊತೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇವೆ. ಒಟ್ಟಾರೆ ನಮ್ಮ ಪ್ರಯತ್ನ ಅವರ ಜೊತೆಗಿನ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದಾಗಿದೆ. ನಾವು ಈಗಲೂ ಮಾತುಕತೆಗೆ ಮುಕ್ತವಾಗಿದ್ದೇವೆ. ಒಕ್ಕೂಟಗಳ ಜೊತೆ ಚರ್ಚೆ ನಡೆಸುತ್ತಿದ್ದೇವೆ. ಮಾತುಕತೆ ಮೂಲಕ ಮುಂದುವರೆದು ಪರಿಹಾರದ ವಿಶ್ವಾಸವಿದೆ ಎಂದವರು ತಿಳಿಸಿದ್ದಾರೆ.
ಔಪಚಾರಿಕ ಮಾತುಕತೆಗಳು ಸ್ಥಗಿತಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಅನೌಪಚಾರಿಕ ಮಾತುಕತೆಗಳು ನಡೆಯುತ್ತಿವೆ. ಪರಿಹಾರ ಕಂಡುಕೊಳ್ಳುವ ಆಶಾಭಾವನೆ ಇದೆ ಎಂದು ತೋಮರ್ ಹೇಳಿದ್ದಾರೆ.
ರೈತರ ಬಗ್ಗೆ ಕಾಳಜಿ ಇರುವ ರೈತ ಸಂಘಟನೆಗಳು ಕೃಷಿಕ ಸಮುದಾಯದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು. ಅದರಿಂದ ಸರ್ಕಾರ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗುತ್ತದೆ. ರೈತ ಸಮುದಾಯದ ಹಿತಕ್ಕೆ ಜಾರಿಗೆ ತಂದಿರುವ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಪಟ್ಟು ಹಿಡಿಯಬಾರದು ಎಂದೂ ಅವರು ಹೇಳಿದ್ದಾರೆ.