ಬೆಂಗಳೂರು, ಡಿ.17- ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಎಸ್. ನಾಗಶ್ರೀ ಅವರನ್ನು ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ವರ್ಗಾಯಿಸಲಾಗಿದೆ. ಈ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿನರಾಳ್ಕರ್ ಅವರು ಕೊಡಗು ಜಿಲ್ಲೆಗೆ ವರ್ಗವಾದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಈ ಸ್ಥಾನ ಖಾಲಿ ಉಳಿದಿತ್ತು.
ನಾಗಶ್ರೀ ಅವರ ವರ್ಗಾವಣೆಯಿಂದ ತೆರವಾಗಿರುವ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಕಳೆದ ವಾರ ಮುಂಬಡ್ತಿ ಪಡೆದಿರುವ ಇ.ಚಂದ್ರಕಲಾ ಅವರನ್ನು ನೇಮಕ ಮಾಡಲಾಗಿದೆ. ಚಂದ್ರಕಲಾ ಅವರು ಈವರೆಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಿಕ ದಂಡಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಕಳೆದ ವಾರ ಮುಂಬಡ್ತಿ ಪಡೆದಿದ್ದ ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಾಬಪ್ಪ ಅವರು ಬೆಂಗಳೂರು ಜಿಲ್ಲಾ 9ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ವರ್ಗಾಯಿಸಲಾಗಿದೆ.