ದಾವಣಗೆರೆ, ಡಿ.12- ನಗರ ಮತ್ತು ಜಿಲ್ಲೆಯ ಅಭಿವೃದ್ಧಿಯಲ್ಲಿ ಶಾಮ ನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರದ್ದು ತುಂಬಿದ ಕೊಡ. ಬಿಜೆಪಿಯದ್ದು ಖಾಲಿ ಡಬ್ಬ ಸೌಂಡ್ ಜಾಸ್ತಿ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಅವರು ಬಿಜೆಪಿ ವಿರುದ್ಧ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದಾರೆ.
ಎಸ್.ಎಸ್. ಹೈಟೆಕ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಸಾರ್ವಜನಿಕ ರಸ್ತೆಗಳಿ ದ್ದರೆ ಬಂದು ತೋರಿಸಲಿ. ನಾವು ಸಂಸದ ಜಿ.ಎಂ. ಸಿದ್ದೇಶ್ವರ ಒಡೆತನದ ಜಿಎಂಐಟಿ ಇಂಜಿನಿಯರಿಂಗ್ ಕಾಲೇಜ್ ಹಾಗೂ ಅರುಣ ಚಿತ್ರಮಂದಿರದ ಎದುರು ಇರುವ ಅವರ ನಿವೇಶನದ ದಾಖಲೆಗಳನ್ನು ಅವರು ತಮ್ಮ ಕಛೇರಿಯಿಂದ ತರಲಿ. ಎಲ್ಲೆಲ್ಲಿ ಸಾರ್ವಜನಿಕ ರಸ್ತೆಗಳಿವೆ ಎಂದು ನಾವು ತೋರಿಸುತ್ತೇವೆ. ಸಿದ್ದೇಶ್ವರ ಅವರು ಬಡ ಸಣ್ಣ ಕೈಗಾರಿಕೋದ್ಯಮಗಳಿಗೆ ಮೀಸಲಾಗಿದ್ದ ಜವಳಿ ಪಾರ್ಕ್ ನಲ್ಲಿ 12 ಎಕರೆ ಜಮೀನು ಲಪಟಾಯಿಸಿ ಕಾಲೇಜು ಕಟ್ಟಿದ್ದಾರೆ. ಬಿಜೆಪಿಯವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.
ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕೈ ಬಿಡಬೇಕು. ಕಳೆದ ಕೆಲ ದಿನಗಳಿಂದ ಅಭಿವೃದ್ಧಿ ಕಡೆಗೆ ಗಮನ ಕೊಡದೆ, ಕೇವಲ ಕಾಂಗ್ರೆಸ್ ನಾಯಕ ಶಿವಶಂಕರಪ್ಪ ಅವರ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದೇ ಬಿಜೆಪಿಯ ಸಾಧನೆ ಎಂಬ ರೀತಿಯಲ್ಲಿ ತೊಡಗಿದ್ದಾರೆ. ಎಸ್ಸೆಸ್ ಮತ್ತು ಎಸ್ಸೆಸ್ಸೆಂ ಅಧಿಕಾರದಲ್ಲಿದ್ದಾಗ ಸ್ಮಾರ್ಟ್ ಸಿಟಿ, ಜಲಸಿರಿ, ಸಿಮೆಂಟ್ ರಸ್ತೆ ಸೇರಿದಂತೆ ಅಭಿವೃದ್ಧಿ ಪರ್ವವವನ್ನೇ ಕೈಗೊಂಡಿದ್ದರು. ಕಾಂಗ್ರೆಸ್ ಅಧಿಕಾರ ಹೋಗಿ ಎರಡೂವರೆ ವರ್ಷಗಳೇ ಕಳೆದರೂ ಇಂದಿಗೂ ಅದರ ಅನುದಾನಗಳೇ ಸಾಕ್ಷಿಯಾಗಿ ನಗರದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ದೂಡಾ ಮಾಜಿ ಅಧ್ಯಕ್ಷ ಮಾಲತೇಶ್ ರಾವ್ ಜಾಧವ್ ಮಾತನಾಡಿ, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ದೂಡಾ ಅಧ್ಯಕ್ಷರಾಗಿದ್ದ ವೇಳೆ ಎಸ್. ನಿಜಲಿಂಗಪ್ಪ ಬಡಾವಣೆಯ ಮೂಲೆ ನಿವೇಶನಗಳನ್ನು ಹರಾಜು ಮಾಡಿದ್ದರು. ಹರಾಜಿನಲ್ಲಿ 556 ನಿವೇಶನ ಸಂಖ್ಯೆಯನ್ನು ತಮ್ಮ ಸಂಬಂಧಿಕರ ಹೆಸರಿಗೆ ಹರಾಜು ಮಾಡಿಸಿ ನಂತರ ತಮ್ಮ ಪತ್ನಿ ಹೆಸರಿಗೆ ದಾನ ಪತ್ರ ಮಾಡಿಸಿದ್ದಾರೆ. ಇದೇ ಸ್ಥಳದಲ್ಲಿ ಸೆಟ್ ಬ್ಯಾಕ್ ಬಿಡದೆ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ಈ ಭ್ರಷ್ಟಾಚಾರ ಬಿಜೆಪಿಯವರ ಕಣ್ಣಿಗೆ ಕಾಣುತ್ತಿಲ್ಲವೇ ? ಜೆ.ಹೆಚ್. ಪಟೇಲ್ ಬಡಾವಣೆಯ ನಿವೇಶನಗಳ ಹಂಚಿಕೆಯಲ್ಲಿ ನಡೆದ ಅವ್ಯವಹಾರದ ಪ್ರಕರಣ ಇಂದಿಗೂ ಲೋಕಾಯುಕ್ತ ನ್ಯಾಯಾಲಯದಲ್ಲಿದೆ. ಮೊದಲು ತಾವೇನು ಎಂಬುದನ್ನು ನೋಡಿಕೊಳ್ಳಲಿ ಎಂದರು.
ದೂಡಾ ಮಾಜಿ ಅಧ್ಯಕ್ಷ ಶಾಮನೂರು ರಾಮಚಂದ್ರಪ್ಪ, ಅಯೂಬ್ ಪೈಲ್ವಾನ್, ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯರುಗಳಾದ ಕೆ. ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಬಿ.ಹೆಚ್. ಉದಯ್ ಕುಮಾರ್, ಮುಖಂಡರುಗಳಾದ ಸೀಮೆಎಣ್ಣೆ ಮಲ್ಲೇಶ್, ಶಾಮನೂರು ಟಿ. ಬಸವರಾಜ್, ಶಿವಕುಮಾರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.